ಸೋಮವಾರಪೇಟೆ, ಜ.2: ಇಲ್ಲಿಗೆ ಸಮೀಪದ ಕಲ್ಕಂದೂರು ಗ್ರಾಮದ ಕೂಡುರಸ್ತೆಯ ಶ್ರೀ ಶಾಸ್ತ ಯುವಕ ಸಂಘದ ವತಿಯಿಂದ ಕೂಡುರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರದಲ್ಲಿ 3ನೇ ವರ್ಷದ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಕಲ್ಕಂದೂರು ಗ್ರಾಮದೇವತೆ ಗಳಿಗೆ, ಗ್ರಾಮದಲ್ಲಿನ ವನದೇವತೆ ಗಳಿಗೆ ಪೂಜೆ ಸಲ್ಲಿಸಿದ ನಂತರ ಅಯ್ಯಪ್ಪಸ್ವಾಮಿ ಭಜನಾ ಮಂದಿರದಲ್ಲಿ ಗಣಪತಿ ಹೋಮ ಹಾಗೂ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.

ಅಪರಾಹ್ನ ಯಡೂರು ಗ್ರಾಮದ ಸೋಮೇಶ್ವರ ದೇವಾಲಯದ ಬಳಿಯಿಂದ ಕೇರಳದ ಚಂಡೆ ವಾದ್ಯ ಹಾಗೂ ಯಡೂರು ಗ್ರಾಮಸ್ಥರಿಂದ ಕಳಸದೊಂದಿಗೆ, ಅಲಂಕೃತ ವಾಹನದಲ್ಲಿ ಅಯ್ಯಪ್ಪಸ್ವಾಮಿ ಭಾವಚಿತ್ರವನ್ನಿರಿಸಿ ಮೆರವಣಿಗೆ ನಡೆಸಲಾಯಿತು.

ನಂತರ ಕಲ್ಕಂದೂರು ಗ್ರಾಮದ ಶ್ರೀ ಮಹದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಕಲ್ಕಂದೂರು ಗ್ರಾಮಸ್ಥರಿಂದ ದೀಪಾರತಿಯೊಂದಿಗೆ ಕೂಡು ರಸ್ತೆಯ ಅಯ್ಯಪ್ಪಸ್ವಾಮಿ ಭಜನಾ ಮಂದಿರದವರೆಗೆ, ಅಯ್ಯಪ್ಪ ಸ್ವಾಮಿಯ ಮಂತ್ರಘೋಷ, ಶರಣ ಘೋಷಗಳೊಂದಿಗೆ ಮೆರವಣಿಗೆ ನಡೆಯಿತು.

ನಂತರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಭಜನೆ, ಶರಣಘೋಷದ ನಂತರ ಮಹಾಮಂಗಳಾರತಿ ನಡೆಯಿತು. ಮಂಡಲ ಪೂಜೋತ್ಸವದಲ್ಲಿ ಅಯ್ಯಪ್ಪ ವ್ರತಾಧಾರಿಗಳು, ಯಡೂರು ಹಾಗೂ ಕಲ್ಕಂದೂರು ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿಸಿದ್ದರು. ರಾತ್ರಿ ಶ್ರೀಶಾಸ್ತ ಯುವಕ ಸಂಘದ ವತಿಯಿಂದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಶ್ರೀ ಶಾಸ್ತ ಯುವಕ ಸಂಘದ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಹರೀಶ್, ಖಜಾಂಚಿ ಶಿವಕುಮಾರ್, ಪದಾಧಿಕಾರಿಗಳಾದ ಸುರೇಶ್, ನರೇಂದ್ರ, ಉದಯ, ವಿನೋದ್ ಕುಮಾರ್ ಸೇರಿದಂತೆ ಇತರರು ಪೂಜೋತ್ಸವದ ಯಶಸ್ಸಿಗೆ ಶ್ರಮಿಸಿದರು.