ಮಡಿಕೇರಿ, ಜ. 2: ಶ್ರೀ ಕಾವೇರಿ ತವರು ಕೊಡಗು ಹಾಗೂ ದೇವಾಲಯಗಳ ನಾಡು ಕೇರಳದ ನಡುವೆ ಅವಿನಾಭಾವ ಸಂಬಂಧ ಕಲ್ಪಿಸಿರುವ ಕಣ್ಣೂರು ಜಿಲ್ಲೆ ಉಳಿಕಲ್ ಗ್ರಾಮದ ಶ್ರೀ ಬೈತೂರಪ್ಪ ದೇವಾಲಯದ ಕೋಮರತಚ್ಚನ್ (ದರ್ಶನ ಪಾತ್ರಿ) ಡಿ. 31 ರಿಂದ ನಮ್ಮ ಜಿಲ್ಲೆಯಲ್ಲಿ ಸಂಚಾರ ಆರಂಭಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯೊಂದಿಗೆ ಶ್ರೀ ಬೈತೂರಪ್ಪ ದೇವರೇ ಜಿಲ್ಲೆಯಲ್ಲಿ ಸಂಚರಿಸುವ ನಂಬಿಕೆ ಮತ್ತು ಶ್ರದ್ಧೆಯಿಂದ ಕೋಮರತಚ್ಚನನ್ನು ಬರಮಾಡಿಕೊಳ್ಳುವದು ವಾಡಿಕೆ.
ವರ್ಷಂಪ್ರತಿ ಬೈತೂರಿನಲ್ಲಿ ಜರುಗುವ ವಾರ್ಷಿಕ ಉತ್ಸವಕ್ಕೆ ಮುನ್ನಾ ದಿನಗಳಲ್ಲಿ ಈ ಸಂಚಾರ ನಡೆಯಲಿದೆ. ಇದೇ ಧನುರ್ಮಾಸದ 28 (ಜ. 13 ರಿಂದ) ಮಕರ ಮಾಸದ 12 (ಜ. 26) ತನಕ ಬೈತೂರು ವಾರ್ಷಿಕೋತ್ಸವ ಜರುಗಲಿದೆ. ಕೇರಳ ಸರಕಾರದ ಮಲಬಾರ್ ದೇವಸ್ವಂಬೋರ್ಡ್ ಅಧಿನದಲ್ಲಿರುವ ಈ ದೇವಾಲಯದ ತಕ್ಕ ಮುಖ್ಯಸ್ಥರಾಗಿ ಕೊಡಗಿನ ಪುಗ್ಗೇರ ಕುಟುಂಬಸ್ಥರು ಕಾರ್ಯನಿರ್ವಹಿಸುವದು ಉಭಯ ಕಡೆಯ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಡಿ. 31 ರಂದು ಉಷಾ ಕಾಲದಲ್ಲಿ ಬೈತೂರು ದೇಗುಲದಲ್ಲಿ ವಿಶೇಷ ಪೂಜೆಯೊಂದಿಗೆ ಕೊಡಗಿನತ್ತ ಸಂಚಾರ ಹೊರಟಿರುವ ಕೋಮರತಚ್ಚ ವೀರಾಜಪೇಟೆ ಪುಗ್ಗೇರ ಕುಟುಂಬ ಸಂದರ್ಶಿಸಿ ಹೆಗ್ಗಳದ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ತಂಗುವದು ವಾಡಿಕೆ.
ಮುಂದುವರಿದು ತಾ. 1 ರಂದು ಚೆಂಬೆಬೆಳ್ಳೂರು ಕೊಳುವಂಡ ಐನ್‍ಮನೆ ಸಂದರ್ಶಿಸಿ, ಆ ಗ್ರಾಮದ ಶ್ರೀ ಈಶ್ವರ ದೇವಾಲಯದಲ್ಲಿ ತಂಗಲಿದೆ.
ತಾ. 2 ರಂದು ಬೆಳಿಗ್ಗೆ ದೇವಣಗೇರಿ ಮುಕ್ಕಾಟಿರ ಐನ್‍ಮನೆ ತಲಪಿ, ಅಲ್ಲಿನ ಶ್ರೀ ಈಶ್ವರ ಗ್ರಾಮದ ದೇವಾಲಯದಲ್ಲಿ ಉಳಿಯಲಿದೆ.
(ಮೊದಲ ಪುಟದಿಂದ) ಅಲ್ಲಿಂದ ಮುಂದು ವರಿದು ಈ ಬೆಳಿಗ್ಗೆ ಚೆಂಬೆಬೆಳ್ಳೂರು ಪುಗ್ಗೇರ ಐನ್‍ಮನೆಗೆ ತಲಪಿ, ಅಲ್ಲಿನ ಅಂಬಲದಲ್ಲಿ ಭಕ್ತರನ್ನು ಹರಸುತ್ತಾ ಸುತ್ತ ಮುತ್ತಲಿನ ಮನೆಗಳಲ್ಲಿ ತೆರಳಲಿದೆ.
ಈ ರಾತ್ರಿ ಹಾಲುಗುಂದ ಮಚ್ಚೇಟಿರ ಐನ್‍ಮನೆ ಸಂದರ್ಶಿಸಿ ಗ್ರಾಮ ದೇವಾಲಯ ಶ್ರೀ ಭಗವತಿ ಸನ್ನಿಧಿಯಲ್ಲಿ ಪೂಜಾದಿಯೊಂದಿಗೆ, ತಾ. 3 ರಂದು ಮೈತಾಡಿಯಲ್ಲಿರುವ ಚಪ್ಪಂಡ ಐನ್‍ಮನೆಗೆ ಆಗಮಿಸಲಿದೆ. ಅಲ್ಲಿನ ಅಯ್ಯಪ್ಪ ದೇಗುಲದಲ್ಲಿ ತಂಗಲಿದೆ. ತಾ. 4 ರಂದು ಐಚ್ಚೇಟ್ಟಿರ ಐನ್‍ಮನೆ, ಬೇರೇರ ಕೈಮಡ ಸಂದರ್ಶಿ ಸುತ್ತಾ ರಾತ್ರಿ ಕುಂಜಿಲಗೇರಿ ಮುಕ್ಕಾಟಿರ ಐನ್‍ಮನೆಯಲ್ಲಿ ತಂಗುತ್ತದೆ.
ತಾ. 5 ರಂದು ಬೆಳ್ಳುಮಾಡು ಮಾತಂಡ ಐನ್‍ಮನೆ ಹಾಗೂ ಬಲ್ಯಮಂಡ ಐನ್‍ಮನೆಗೆ ತೆರಳಲಿದೆ. ರಾತ್ರಿ ಅರಮೇರಿ ಭಗವತಿ ಸನ್ನಿಧಿ ಯಲ್ಲಿ ತಂಗಲಿದೆ. ತಾ. 6 ರಂದು ಕದನೂರು ಪಾಲೆಕಂಡ ಹಾಗೂ ಇತರ ಕುಟುಂಬ ಸದರ್ಶಿಸಿ ರಾತ್ರಿ ಕೆದಮುಳ್ಳೂರು ಈಶ್ವರ ಸನ್ನಿಧಿ ತಲಪಲಿದೆ.
ಆ ಸನ್ನಿಧಿಯಿಂದ ತಾ. 7 ರಂದು ಪೂಜೆ ಬಳಿಕ ಬೆಳಿಗ್ಗೆ ಮುಂದುವ ರಿದು, ಕದನೂರು ಭಗವತಿ ಸನ್ನಿಧಿ, ಚೋಕಂಡ ಐನ್‍ಮನೆ ದರ್ಶಿಸಿ ರಾತ್ರಿ ಅಯ್ಯಪ್ಪ ದೇವಾಲಯದಲ್ಲಿ ಉಳಿದುಕೊಳ್ಳಲಿದೆ. ತಾ. 8 ರಂದು ಬೆಳಿಗ್ಗೆ ಕಾಮೆಯಂಡ ಐನ್‍ಮನೆ, ಕೊಡಂದೇರ ಐನ್‍ಮನೆ ಗಳಿಗೆ ಭೇಟಿ ನೀಡಿ ಬಿಟ್ಟಂಗಾಲ ಗ್ರಾಮ ದೇವಾಲಯದಲ್ಲಿ ತಂಗಲಿದ್ದು, ತಾ. 9 ರಂದು ಮೂರಿರ ಐನ್‍ಮನೆಗೆ ಭೇಟಿ ನೀಡಲಿದ್ದು, ತಾ. 10 ರಂದು ಮಾಚೆಟ್ಟಿರ ಐನ್‍ಮನೆ ಸಂದರ್ಶಿಸ ಲಿದ್ದು, ಈ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿ ಶ್ರೀ ಓಂಕಾರೇಶ್ವರ ಸನ್ನಿಧಿ ಮತ್ತು ರಾಜ ಪರಂಪರೆಯಂತೆ ಜಿಲ್ಲಾ ಖಜಾನೆಗೆ ಭೇಟಿ ನೀಡುವ ಸಂಪ್ರದಾಯವಿದೆ.
ಅನಂತರದಲ್ಲಿ ಮೂಲ ಸ್ಥಳ ಬೈತೂರಿಗೆ ಹಿಂತೆರಳಲಿದ್ದು, ಅಲ್ಲಿ ವಾರ್ಷಿಕೋತ್ಸವ ಜರುಗಲಿದೆ. ಜಿಲ್ಲೆಯಿಂದ ಎತ್ತು ಪೋರಾಟ, ದುಡಿಪಾಟ್ ಸಹಿತ ಕೊಡಗಿನ ಬಹುತೇಕ ಗ್ರಾಮ ದೇವಾಲಯಗಳ ದರ್ಶನ ಪಾತ್ರಿಗಳು ಉತ್ಸವದಲ್ಲಿ ಭಾಗವಹಿಸುವದು ರೂಢಿಯಾಗಿದೆ.