ಗೋಣಿಕೊಪ್ಪ ವರದಿ, ಜ. 2: ಪುತ್ತರಿ ಬೆಳೆಗಾರರ ಉತ್ಪಾದಕ ಸಂಘ ಎರಡು ವರ್ಷಗಳ ಅವಧಿಯಲ್ಲಿ ರೂ. 1 ಕೋಟಿ ವ್ಯವಹಾರ ನಡೆಸಿ ಕೃಷಿಕರಿಗೆ ಆದಾಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಪುತ್ತರಿ ಬೆಳೆಗಾರರ ಉತ್ಪಾದಕರ ಸಂಘದ ಅಧ್ಯಕ್ಷ ಮನೆಯಪಂಡ ಸೋಮಯ್ಯ ತಿಳಿಸಿದರು.

ಕಿತ್ತಳೆ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಪುತ್ತರಿ ಬೆಳೆಗಾರರ ಉತ್ಪಾದಕ ಸಂಘದ 2ನೇ ವರ್ಷದ ಮಹಾಸಭೆಯಲ್ಲಿ ಮಾತನಾಡಿ, ಈಗಾಗಲೇ 2 ವರ್ಷಗಳಲ್ಲಿ ರೂ. 1 ಕೋಟಿಯಷ್ಟು ವ್ಯವಹಾರ ನಡೆಸಲಾಗಿದ್ದು, ಕೃಷಿಕರಿಗೆ ಲಾಭದಲ್ಲಿ ಕೃಷಿ ವಸ್ತುಗಳು ದೊರೆಯುವಂತಾಗಿದೆ. ಸಂಘಕ್ಕೆ ಸಣ್ಣ ಮೊತ್ತದ ಲಾಭ ಉಳಿಸಿಕೊಂಡು ಕೃಷಿಕರಿಗೆ ಹೆಚ್ಚು ಆದಾಯ ಬರುವಂತೆ ನೋಡಿಕೊಳ್ಳಲಾಗುತ್ತಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವದು ಎಂದರು.

ಉತ್ಪಾದನೆ ಜಾಗದಿಂದ ನೇರವಾಗಿ ಕೃಷಿ ಪರಿಕರಗಳನ್ನು ಮಾರಾಟ ಮಾಡುವದರಿಂದ ಹೆಚ್ಚಿನ ಲಾಭವಾಗುತ್ತಿದೆ. ಮದ್ಯವರ್ತಿಗಳಿಗೆ ಹೋಗುತ್ತಿದ್ದ ಲಾಭದ ಪ್ರಮಾಣವನ್ನು ನೇರವಾಗಿ ಕೃಷಿಕರಿಗೆ ದೊರೆಯುವಂತೆ ಮಾಡಲಾಗಿದೆ ಎಂದರು.

ಸಂಘದಿಂದ ಸದಸ್ಯರಿಗೆ ಮತ್ತಷ್ಟು ಲಾಭ ಪಡೆಯುವಂತಾಗಲು ಮುಂದಿನ ದಿನಗಳಲ್ಲಿ ಕಾಫಿ ಹಾಗೂ ಕಾಳುಮೆಣಸು ರೈತರಿಂದ ಖರೀದಿಸಿ ಮಾರಾಟ ಮಾಡಲು ಚರ್ಚೆ ನಡೆಯಿತು. ಪುತ್ತರಿ ಸಂಘದಿಂದ ಕಾಫಿ, ಕಾಳುಮೆಣಸು ಖರೀದಿಸಿ ವಿವಿಧ ಕಂಪೆನಿಗಳಿಗೆ ನೇರವಾಗಿ ಪೂರೈಕೆ ಮಾಡುವದರಿಂದ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಈ ಕುರಿತು ಗಂಭೀರ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಸಂದರ್ಭ ಸಂಘದ ಮಾರುಕಟ್ಟೆ ಅಭಿವೃದ್ಧಿಗೆ ಪೊನ್ನಂಪೇಟೆಯಲ್ಲಿ 25 ಸೆಂಟ್ ಜಾಗ ದಾನ ಮಾಡಿದ ಸಂಘದ ಅಧ್ಯಕ್ಷ ಮನೆಯಪಂಡ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಕಟ್ಟಡ ಅಭಿವೃದ್ಧಿ ಮೂಲಕ ಮತ್ತಷ್ಟು ವ್ಯವಹಾರ ನಡೆಸಲು ಯೋಜನೆ ರೂಪಿಸುವಂತೆ ನಿರ್ಧರಿಸಲಾಯಿತು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ನಾಣಯ್ಯ ಅವರು ಮಾತನಾಡಿ, ಪುತ್ತರಿ ಬೆಳೆಗಾರರ ಉತ್ಪಾದಕರ ಸಂಘ ‘ಎ’ ಗ್ರೇಡ್ ಮಾನ್ಯತೆ ಮೂಲಕ ಸಾಧನೆ ಮಾಡಿದೆ. ಸುಮಾರು 200 ಉತ್ಪಾದಕರ ಸಂಘಗಳಲ್ಲಿ ಮೊದಲ 5 ಸ್ಥಾನದಲ್ಲಿರುವದು ಬೆಳೆವಣಿಗೆಯ ಸಂಕೇತವಾಗಿದೆ. ಜಿಲ್ಲೆಯ ಕೃಷಿಕರಿಗೆ ಮತ್ತಷ್ಟು ಲಾಭದಾಯಕ ಕೃಷಿ ಪರಿಕರಗಳು ದೊರೆಯುವಂತಾಗಬೇಕು ಎಂದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ಸಂಘವು ಹೆಚ್ಚು ಕಾರ್ಯಚಟುವಟಿಕೆಯಲ್ಲಿ ತೊಡಗಿ ಕೊಂಡ ಕಾರಣ ರೂ. 1 ಕೋಟಿ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಕೃಷಿಕರಿಗೆ ಲಾಭವಾಗುವಂತ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಮುಕ್ಕಾಟಿರ ಕಾರ್ಯಪ್ಪ, ತಾಂತ್ರಿಕ ಸಲಹೆಗಾರ ಡಾ. ಪ್ರಭಾಕರ್, ಸಂಘದ ಮುಖ್ಯಸ್ಥ ಕಳ್ಳಂಗಡ ಸುಬ್ಬಯ್ಯ, ನಿರ್ದೇಶಕರುಗಳು ಉಪಸ್ಥಿತರಿದ್ದರು. ಸಿಇಒ ಹೊಟ್ಟೇಂಗಡ ಪೊನ್ನಣ್ಣ ವಾರ್ಷಿಕ ವರದಿ ವಾಚಿಸಿ ದರು. ಕಾರ್ಯಪ್ಪ ವಂದಿಸಿದರು.