ಮಡಿಕೇರಿ, ಜ.2: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿರುವ ಸಾಹಿತ್ಯ ಪ್ರವಾಸಕ್ಕೆ ಉದ್ಯಮಿ ಹಾಗೂ ಕಸಾಪದ ಹಿರಿಯ ಸದಸ್ಯ ಬಿ.ಆರ್. ನಾಗೇಂದ್ರ ಪ್ರಸಾದ್ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚಾಲನೆ ನೀಡಿದರು. ಕೊಡಗು ಜಿಲ್ಲಾ ಕಸಾಪ, ಶಿವಮೊಗ್ಗ ಜಿಲ್ಲಾ ಕಸಾಪದ ಸಹಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಹೇಮಾಂಗಣದಲ್ಲಿ, ಆಯೋಜಿಸಲಾಗಿರುವ ಮಲೆನಾಡಿನ ಭಾವಸಂಗಮ ಎಂಬ ಕವಿಗೋಷ್ಠಿಯಲ್ಲಿ ಭಾಗವಹಿಸಿ ನಂತರ ಧಾರವಾಡದಲ್ಲಿ ನಡೆಯುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಸುಮಾರು ನಲವತ್ತು ಮಂದಿ ತೆರಳಿದರು.

ಕಸಾಪದ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್, ಕಾರ್ಯದರ್ಶಿ ಕೆ.ಎಸ್. ರಮೇಶ್, ಎನ್.ಎ. ಅಶ್ವಥ್ ಕುಮಾರ್, ಕೋಶಾಧ್ಯಕ್ಷ ಎಸ್.ಎ. ಮುರಳಿಧರ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ, ಕುಶಾಲನಗರ ಹೋಬಳಿ ಅಧ್ಯಕ್ಷ ರಂಗಸ್ವಾಮಿ, ಶನಿವಾರಸಂತೆ ಹೋಬಳಿ ಅಧ್ಯಕ್ಷ ಸಿ.ಎಮ್. ಪುಟ್ಟಸ್ವಾಮಿ ಸೇರಿದಂತೆ ಜಿಲ್ಲೆಯ ಹಲವಾರು ಸಾಹಿತ್ಯ ಆಸಕ್ತರು ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ.