ಮಡಿಕೇರಿ, ಡಿ. 31: ಪ್ರಕೃತಿದತ್ತವಾದ... ವಿಶಿಷ್ಟ ಸಂಸ್ಕøತಿ... ಆಚಾರ-ವಿಚಾರಗಳೊಂದಿಗೆ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯ ಪಾಲಿಗೆ 2018 ದುರಂತ ವರ್ಷ. ಅಂತೂ... ಇಂತೂ 2018ರ ಈ ವರ್ಷ ಇತಿಹಾಸದ ಪುಟ ಸೇರುವದರೊಂದಿಗೆ 2019ರ ನೂತನ ವರ್ಷ ಪದಾರ್ಪಣೆ ಮಾಡಿದೆ.

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ವಿವಿಧ ಅನುಭವಗಳನ್ನು ಹೊಂದಿರುವ ಜಿಲ್ಲೆಯ ಪ್ರಮುಖ ಹಲವು ಮಹಿಳಾ ಅಧಿಕಾರಿಗಳು-ಜನಪ್ರತಿನಿಧಿಗಳು 2018 ಹೇಗಿತ್ತು? 2019ರ ನಿರೀಕ್ಷೆ ಏನು ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.ಸಾಮರಸ್ಯ, ಶಾಂತಿ, ನೆಮ್ಮದಿ ಮೂಡಲಿ 2018ರಲ್ಲಿ ಕೆಲವು ಒಳ್ಳೆಯದು ನಡೆದರೂ ದುರಂತಗಳೂ ಸಂಭವಿಸಿರುವದು ವಿಷಾದಕರ. ಕೊಡಗಿನಲ್ಲಿ ಹಲವಾರು ಕಡೆ ಅವಘಡಗಳು ನಡೆದಿವೆ. ಅದರಲ್ಲೂ ಇದೀಗ ಎದುರಾಗುತ್ತಿರುವ ನೂತನ ವರ್ಷ ಎಲ್ಲರಲ್ಲೂ ನೆಮ್ಮದಿ, ಸುಖ, ಶಾಂತಿಯನ್ನು ತರಲಿ, ಒಗ್ಗಟ್ಟು ಸಾಮರಸ್ಯದ ಬದುಕು ಎಲ್ಲರದ್ದಾಗಲಿ.

-ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಸದಸ್ಯೆ

ಶುಭ ತರಲಿ

2018 ಪ್ರಾಕೃತಿಕ ವಿಕೋಪದಿಂದ ಕೊಡಗಿಗೆ, ಕೊಡಗಿನ ಜನತೆಗೆ ಕರಾಳವಾಗಿತ್ತು. ಆಡಳಿತ ವ್ಯವಸ್ಥೆಯಲ್ಲಿ ಇಂತಹದ್ದೇ ಕಾರ್ಯಕ್ರಮಗಳನ್ನು ನಡೆಸುವದಾಗಿ ಖಚಿತವಾಗಿ ಹೇಳ ಲಾಗದು. ಆದರೆ ನೂತನ ವರ್ಷ ಎಲ್ಲರಿಗೂ ಶುಭ ತರಲಿ.

- ಪಿ.ಐ. ಶ್ರೀವಿದ್ಯಾ, ಜಿಲ್ಲಾಧಿಕಾರಿ

ಹಿಂದಿನ ಪರಿಸ್ಥಿತಿ ಬಾರದಿರಲಿ

ಇದೀಗ ಇತಿಹಾಸದ ಪುಟಕ್ಕೆ ಸೇರುತ್ತಿರುವ 2018ರ ವರ್ಷದಂತಹ ಕಹಿ ಘಟನೆಗಳು ಜನತೆಗೆ ಎದುರಾಗದಿರಲಿ. ಯಾವದೇ ಅನಾಹುತಗಳು ಸಂಭವಿಸದಂತೆ ಸಮಾಜದಲ್ಲಿ ಜಿಲ್ಲೆಯ ಶಾಂತಿ, ಸುವ್ಯವಸ್ಥೆ, ನೆಮ್ಮದಿ ಮೂಡುವಂತಾಗಲಿ. ಕಾನೂನು ವ್ಯವಸ್ಥೆಗೂ ಯಾವದೇ ಚ್ಯುತಿಯಾಗದಂತೆ ಎಲ್ಲವೂ ಸಹಜತೆಯಿಂದ ಕೂಡಿರಲಿ.

-ಡಾ. ಸುಮನ್ ಪಣ್ಣೇಕರ್, ಪೊಲೀಸ್ ವರಿಷ್ಠಾಧಿಕಾರಿ

ಕಸಮುಕ್ತ ಕೊಡಗು

2019ರ ಸಾಲಿನಲ್ಲಿ ಕಸಮುಕ್ತ ಜಿಲ್ಲೆಯ ಕನಸಿನೊಂದಿಗೆ ಪ್ರತಿ ಗ್ರಾ.ಪಂ. ಹಂತದಿಂದ ಗಮನ ಹರಿಸಲು ಯೋಜನೆ ರೂಪಿಸಲಾಗುವದು. 2018ರ ಪ್ರಾಕೃತಿಕ ವಿಕೋಪ ಹಾನಿಯ ಸಂಬಂಧ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಕಾಳಜಿ ತೋರುತ್ತಿವೆ. ಇಂತಹ ಸಂಘ-ಸಂಸ್ಥೆಗಳ ಸಹಕಾರದಿಂದ ವೈಜ್ಞಾನಿಕ ರೀತಿ ಕಸ ನಿರ್ವಹಣೆಗೆ ಜನತೆಯನ್ನು ತರಬೇತಿಗೊಳಿಸಲಾಗುವದು; ವಿಶೇಷವಾಗಿ ಮಹಿಳೆಯರನ್ನು ಆರ್ಥಿಕ ಸ್ವಾವಲಂಬನೆಯ ಬದುಕು ಕಂಡುಕೊಳ್ಳಲು ಪ್ರೋತ್ಸಾಹಿಸುವದರೊಂದಿಗೆ ಉದ್ಯೋಗ ಸೃಷ್ಟಿಸಲಾಗುವದು.

-ಲಕ್ಷ್ಮೀಪ್ರಿಯ, ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ

ಭವಿಷ್ಯದ ಆತಂಕ

2018ರಲ್ಲಿ ಜನರು ಬಹಳಷ್ಟು ಕಷ್ಟ-ನಷ್ಟ ಅನುಭವಿಸಿರುವದು ಮರೆಯಲಾರದ ನೋವನ್ನು ಉಂಟು ಮಾಡಿದೆ. 2019ರ ಭವಿಷ್ಯದ ಬದುಕಿನ ಬಗ್ಗೆಯೂ ತೀವ್ರ ಆತಂಕವಿದೆ. ರೈತ ಬೆಳೆದಿರುವ ಭತ್ತ, ಕಾಫಿ, ಮೆಣಸು ಸಹಿತ ಯಾವ ಫಸಲೂ ಕೈ ಹಿಡಿದಿಲ್ಲ. ಭೂಕುಸಿತದ ಬಗ್ಗೆಯೂ ಭವಿಷ್ಯದಲ್ಲಿ ಭಯ ತೊಡಗಿದೆ. ದೇವರು ಮುಂದಕ್ಕೆ ನೋವು ದೂರ ಮಾಡಿ ನೆಮ್ಮದಿಯನ್ನು ಕರುಣಿಸಲಿ ಎಂದಷ್ಟೇ ಪ್ರಾರ್ಥಿಸೋಣ.

-ಲೋಕೇಶ್ವರಿ ಗೋಪಾಲ್, ಜಿ.ಪಂ. ಉಪಾಧ್ಯಕ್ಷೆ

(ಮೊದಲ ಪುಟದಿಂದ)

ನಿರೀಕ್ಷೆಯಂತೆ ಸಾಧಿಸಿಲ್ಲ

ಮಳೆ ಆಗಸ್ಟ್‍ನಲ್ಲಿ ಸಾಕಷ್ಟು ಹಾನಿ ಉಂಟು ಮಾಡಿತ್ತು. ಹೀಗಾಗಿ ನಿರೀಕ್ಷಿತ ಕೆಲಸಗಳನ್ನು ಮಾಡಲಾಗದೆ ಸಂತ್ರಸ್ತರ ನೋವಿನಲ್ಲಿ ಭಾಗಿಯಾಗಬೇಕಾಯಿತು. ಆ ಮೊದಲು ಚುನಾವಣಾ ಸಂಹಿತೆ ಅಭಿವೃದ್ಧಿಗೆ ತೊಡಕಾಯಿತು. ಇನ್ನು 2019ರಲ್ಲಿ ಭವಿಷ್ಯದ ಕುರಿತು ಸಾಕಷ್ಟು ಯೋಜನೆಗಳಿವೆ. ಎಲ್ಲವನ್ನೂ ಕೈಊಲಂಕಷವಾಗಿ ಗಮನಿಸುತ್ತಾ ಸಮಯ-ಸಂದರ್ಭ ನೋಡಿಕೊಂಡು ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಆಶಯವಿದೆ.

-ಕಾವೇರಮ್ಮ ಸೋಮಣ್ಣ, ಮಡಿಕೇರಿ ನಗರಸಭಾ ಅಧ್ಯಕ್ಷೆ

ಕಾವೇರಿಯ ಕರುಣೆ ಇರಲಿ

ಪ್ರಸಕ್ತ ಮುಗಿಯುತ್ತಿರುವ ವರ್ಷ ಜನತೆಗೆ ಕರಾಳ ಅನುಭವ ನೀಡಿದೆ. ಜನಸಾಮಾನ್ಯರೊಂದಿಗೆ, ಜಿಲ್ಲೆಯ ಬೆಳೆಗಾರರು, ರೈತರು ಸಂಕಷ್ಟಕ್ಕೆ ತುತ್ತಾಗಿರುವದು ಬೇಸರ ಮೂಡಿಸಿದೆ. ಈ ಬಗ್ಗೆ ಕಾಫಿ ಮಂಡಳಿಯ ಮೂಲಕ ಸೂಕ್ತ ವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಮುಂದೆಂದೂ ಈ ರೀತಿಯ ದುರಂತ ಮರುಕಳಿಸದೆ ಹೊಸ ವರ್ಷದ ಮೂಲಕ ನವ ಚೈತನ್ಯ ಮೂಡಲು ಕಾವೇರಿ ಮಾತೆಯ ಆಶೀರ್ವಾದ ಇರಲಿ.

-ರೀನಾ ಪ್ರಕಾಶ್, ಉಪಾಧ್ಯಕ್ಷೆ, ಕಾಫಿ ಮಂಡಳಿ

ಅಭಿವೃದ್ಧಿ ಕಾಣಲಿ

2018 ಜಿಲ್ಲೆಯ ಜನತೆಗೆ ಮರೆಯಲಾಗದ ವರ್ಷದಂತಾಗಿ ಹೋಗಿದೆ. ಕೊಡಗು ಜಿಲ್ಲೆಗೆ ಈ ಬಾರಿ ನಡೆದಂತಹ ದುರಂತ ಮುಂದೆಂದೂ ಬಾರದಿರಲಿ. ಹೊಸ ವರ್ಷ ಎಲ್ಲರಿಗೂ ಒಳಿತಾಗಲಿ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು, ಜನಪ್ರತಿನಿಧಿಯಾಗಿ ಈ ಬಗ್ಗೆ ಗಮನ ಹರಿಸಲಾಗುವದು.

-ಸ್ಮಿತಾ ಪ್ರಕಾಶ್, ವೀರಾಜಪೇಟೆ ತಾ.ಪಂ. ಅಧ್ಯಕ್ಷೆ

ಹೊಸ ನಿರೀಕ್ಷೆ

2018ರಲ್ಲಿ ಜನತೆ ಸಂಕಷ್ಟಗಳನ್ನೇ ಕಾಣುವಂತಾಗಿತ್ತು. ಈ ಪರಿಸ್ಥಿತಿ ಮರುಕಳಿಸದಂತೆ 2019ರ ನೂತನ ವರ್ಷದಿಂದ ಎಲ್ಲರಿಗೂ ಒಳಿತಾಗಲಿ. ಈ ವರ್ಷದಲ್ಲಿ ಜನತೆ ನೆಮ್ಮದಿ ಕಾಣುವ ಆಶಾಭಾವನೆ ಇದೆ. ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ನಿರ್ವಹಿಸುವೆ.

-ತೆಕ್ಕಡೆ ಶೋಭಾ ಮೋಹನ್, ಮಡಿಕೇರಿ ತಾ.ಪಂ. ಅಧ್ಯಕ್ಷೆ

ದಿನದರ್ಶಿ ಬದಲಾವಣೆ

ವೃತ್ತಿ ಜೀವನದಲ್ಲಿ ದೈನಂದಿನ ಕಷ್ಟ ಕೋಟಲೆಗಳ ಸುದ್ದಿ ಮಾಡುತ್ತಲೇ 2018ನೇ ವರ್ಷ ಮುಗಿದು ಹೋಯಿತು. ಭವಿಷ್ಯದಲ್ಲಿ 2019ರ ದಿನದರ್ಶಿ (ಕ್ಯಾಲೆಂಡರ್) ಬದಲಾಯಿಸಿಕೊಂಡು ಎಂದಿನಂತೆ ದೈನಂದಿನ ಕಾಯಕ ಮುಂದುವರಿಯಲಿದೆ. ಹೀಗಾಗಿ ವಿಶೇಷ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ದೈನಂದಿನ ಬೆಳವಣಿಗೆಯನ್ನು ಗಮನಿಸುತ್ತಾ ಮುಂದೆ ಸಾಗಬೇಕಿದೆ. ಹಿಂದಿನ ಕಹಿ ಘಟನೆಗಳು ದೂರವಾಗಿ, ಭವಿಷ್ಯದ ದಿನಗಳು ಸರ್ವರಿಗೆ ಒಳಿತನ್ನು ಉಂಟು ಮಾಡಲಿ.

-ಸವಿತಾ ರೈ, ಅಧ್ಯಕ್ಷೆ, ಜಿಲ್ಲಾ ಪತ್ರಕರ್ತರ ಸಂಘ

ಉತ್ತಮ ವ್ಯವಸ್ಥೆಗೆ ಸಹಕಾರಿಯಾಗಲಿ

ಜಿಲ್ಲೆಯಲ್ಲಿ ಭಾರೀ ಮಳೆ-ಗಾಳಿ ಸೇರಿದಂತೆ ಪ್ರಾಕೃತಿಕ ವಿಕೋಪದಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸವಾಲಿನ ದಿನಗಳು ಎದುರಾಗಿತ್ತು. ಸಮಸ್ಯೆಗಳ ನಡುವೆಯೂ ಸಾಕಷ್ಟು ಶ್ರಮ ವಹಿಸಿ ಕಾರ್ಯನಿರ್ವಹಿಸಲಾಗಿದೆ. ನೂತನ ವರ್ಷ ಸಾರಿಗೆ ವ್ಯವಸ್ಥೆಗೆ ಯಾವದೇ ಧಕ್ಕೆಯಾಗದಂತೆ ಜನತೆಗೆ ಸುಗಮವಾಗಲಿ.

-ಗೀತಾ, ವ್ಯವಸ್ಥಾಪಕಿ, ಕೆ.ಎಸ್.ಆರ್.ಟಿ.ಸಿ.