ಮಡಿಕೇರಿ, ಡಿ. 31: ಮಳೆ ಬಂದಾಗ ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಹರಿಯುವಂತೆ 2018 ಮರೆಯಾಗಿ 2019ರ ಆಗಮನವಾಗಿದೆ. ಕ್ಯಾಲೆಂಡರ್ ಯುಗದ ಹೊಸ ವರ್ಷವನ್ನು ನಾಡಿನ ಜನತೆಯೊಂದಿಗೆ ಪ್ರವಾಸಿಗರು ಸಂಭ್ರಮದಿಂದ ಬರಮಾಡಿಕೊಂಡರು.

ವರ್ಷದ ಕೊನೆಯ ಸೂರ್ಯಾಸ್ತವನ್ನು ಪ್ರವಾಸಿ ತಾಣ ರಾಜರ ಉದ್ಯಾನದಲ್ಲಿ ಕಿಕ್ಕಿರಿದ ಜನಸಂದಣಿ ನಡುವೆ ಕಣ್ತುಂಬಿಕೊಂಡರು. ಮನೆ, ಹೊಟೇಲ್, ರೆಸಾರ್ಟ್, ಹೋಂಸ್ಟೇ ಸೇರಿದಂತೆ ಅಲ್ಲಲ್ಲಿ ಮೈದಾನಗಳಲ್ಲಿ ಪಾರ್ಟಿ ಮಾಡುವ ಮೂಲಕ ಸಂಭ್ರಮಿಸಿ, ನಡುರಾತ್ರಿ 12 ಗಂಟೆಗೆ ಪರಸ್ಪರ ಶುಭಾಶಯ ಹಂಚಿಕೊಂಡರು. ‘ಪಾರ್ಟಿ’ಗೆ ಬೇಕಾದ ಮೂಲ ಪಾನೀಯಕ್ಕಾಗಿ ಬಾರ್, ಸಗಟು ಮಳಿಗೆಯೆದುರು ಪ್ರವಾಸಿಗರ ಸರತಿ ಸಾಲು ಕಂಡುಬಂದಿತು.

ಪ್ರಕೃತಿ ವಿಕೋಪದಿಂದ ಕಂಗೆಟ್ಟು, ಬರಿದಾಗಿದ್ದ ಮಂಜಿನ ನಗರಿ ಮಡಿಕೇರಿಯಲ್ಲಿ ಮತ್ತೆ ಜನ ವೈಭವ ಮರುಕಳಿಸಿದಂತಿತ್ತು.

ಚಿತ್ರ: ಲಕ್ಷ್ಮೀಶ್