ಬೆಂಗಳೂರು, ಡಿ. 31 : ಕೊಡಗಿನ ಮಹತ್ವದ ಜಾನಪದ ಕೃತಿ, ದಕ್ಷಿಣ ಭಾರತದ ಮೊಟ್ಟಮೊದಲ ಲಿಖಿತ ಜಾನಪದ ಕೃತಿಯೆಂದು ಖ್ಯಾತಿ ಪಡೆದಿರುವ ‘ಪಟ್ಟೋಲೆ ಪಳಮೆ’ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಭಾರತದ ವಿವಿಧ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸಲು ಮಹತ್ವದ ತೀರ್ಮಾನ ಕೈ ಗೊಂಡಿದೆ. ನಡಿಕೇರಿಯಂಡ ಚಿಣ್ಣಪ್ಪನವರು 1924 ರಲ್ಲಿ ಸಂಗ್ರಹಿಸಿ ಪ್ರಕಟಿಸಿರುವ ಕನ್ನಡದ ಈ ಕೃತಿ ಭಾರತೀಯ ಭಾಷೆಗಳಿಗೆ ಪರಿಚಯಗೊಳ್ಳಲಿದೆ 25.12.2018 ರಂದು ಬೆಂಗಳೂರಿನಲ್ಲಿ ಡಾ.ಚಂದ್ರಶೇಖರ್ ಕಂಬಾರರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅಕಾಡೆಮಿಯ ಸದಸ್ಯ ಅಡ್ಡಂಡ ಕಾರ್ಯಪ್ಪನವರ ಪ್ರಸ್ತಾªನೆಗೆ ಸಭೆ ಸರ್ವಾನುಮತದಿಂದ ಒಪ್ಪಿ ಈ ತೀರ್ಮಾನ ಕೈಗೊಂಡಿದೆ.

ಇದರ ಜೊತೆಗೆ ಹರದಾಸÀ ಅಪ್ಪಚ್ಚ ಕವಿ ಬರೆದ ನಾಲ್ಕು ನಾಟಕಗಳನ್ನು ಡಾ.ಐ. ಮಾ.ಮುತ್ತಣ್ಣ ಕನ್ನಡಕ್ಕೆ ಅನುವಾದಿಸಿದ್ದು, ಈ ಕನ್ನಡ ಅನುವಾದವನ್ನು ಅಕಾಡೆಮಿ ಪ್ರಕಟಿಸುತ್ತಿದೆ. ಅಪ್ಪಚ್ಚಕವಿಯ ಬದುಕು-ಬರಹದ ಜೀವನಗಾಥೆ ಪುಸ್ತಕವನ್ನು ಕಾರ್ಯಪ್ಪ ರಚಿಸಿದ್ದು ಈಗಾಗಲೇ ಮುದ್ರಣಗೊಳ್ಳುತ್ತಿದ್ದು ಇದೂ ಕೂಡ ಭಾರತದ ಏಳು ಭಾಷೆಗಳಲ್ಲಿ ಅನುವಾದಗೊಳ್ಳುತ್ತಿದೆ.

ಅಲ್ಲದೆ ಕೊಡವ ಭಾಷೆಯ ಬಗ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗಮನ ಹರಿಸಿದ್ದು ಕೊಡವ ಭಾಷೆಯ ಕವಿಗಳಾದ ಬಾಚಿರಣಿಯಂಡ ಅಪ್ಪಣ್ಣ, ಚೆಕ್ಕೆರ ತ್ಯಾಗರಾಜ್, ನಾಗೇಶ್ ಕಾಲೂರ್, ಮೂವೇರ ರೇಖಾ ಪ್ರಕಾಶ್, ಕೊಟ್ರಂಡ ಅಪ್ಪಣ್ಣ ಇವರ ಒಂದೊಂದು ಕವನಗಳನ್ನು ಪೂಮಾಲೆ ಪತ್ರಿಕೆಯ ಅಜ್ಜಿನಿಕಂಡ ಮಹೇಶ್ ನಾಚಯ್ಯ ಇಂಗ್ಲೀಷ್‍ಗೆ ಅನುವಾದಿಸಿದ್ದಾರೆ. ಇವರ ಹೆಸರುಗಳನ್ನು ಸದಸ್ಯ ಅಡ್ಡಂಡ ಕಾರ್ಯಪ್ಪ ಅಕಾಡೆಮಿಗೆ ಶಿಫಾರಸು ಮಾಡಿದ್ದರು. ಇದರಂತೆ ಭಾರತೀಯ ಭಾಷೆಗಳ ಈಶಾನ್ಯ ರಾಜ್ಯಗಳ ಕವನಗಳ ಅನುವಾದ ಕಾರ್ಯಾಗಾರ ಇತ್ತೀಚೆಗೆ ನಡೆದಿದೆ. ಈ ಕಾರ್ಯಗಾರದಲ್ಲಿ ಮಹೇಶ್ ನಾಚಯ್ಯ ಭಾಗವಹಿಸಿದ್ದರು. ಕೊಡಗಿನ ಮತ್ತು ಕೊಡವ ಭಾಷೆಯ ಕೃತಿಗಳು ದೆಹಲಿ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಮೊದಲ ಬಾರಿಗೆ ಈ ಪ್ರಯತ್ನ ಮಾಡಿದೆ ಎಂದು ಅಕಾಡೆಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.