ಸೋಮವಾರಪೇಟೆ, ಡಿ.31: ಇಲ್ಲಿಗೆ ಸಮೀಪದ ಕಲ್ಕಂದೂರು ಗ್ರಾಮದ ಕೂಡುರಸ್ತೆಯ ಶ್ರೀ ಶಾಸ್ತ ಯುವಕ ಸಂಘದ ವತಿಯಿಂದ ಕೂಡುರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರದಲ್ಲಿ ಜ.1ರಂದು (ಇಂದು) 3ನೇ ವರ್ಷದ ಮಂಡಲ ಪೂಜೋತ್ಸವ ಆಯೋಜಿಸಲಾಗಿದೆ.
ಬೆಳಿಗ್ಗೆ 6.30ಕ್ಕೆ ಕಲ್ಕಂದೂರು ಗ್ರಾಮದೇವತೆಗಳಿಗೆ, ಗ್ರಾಮದಲ್ಲಿನ ವನದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. 9 ಗಂಟೆಯಿಂದ ಅಯ್ಯಪ್ಪಸ್ವಾಮಿ ಭಜನಾ ಮಂದಿರದಲ್ಲಿ ಗಣಪತಿ ಹೋಮ ಹಾಗೂ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ, ನಂತರ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 3.30ಕ್ಕೆ ಯಡೂರು ಗ್ರಾಮದ ಸೋಮೇಶ್ವರ ದೇವಾಲಯದ ಬಳಿಯಿಂದ ಚಂಡೆ ವಾದ್ಯ ಹಾಗೂ ಯಡೂರು ಗ್ರಾಮಸ್ಥರಿಂದ ಕಳಸದೊಂದಿಗೆ ಅಯ್ಯಪ್ಪಸ್ವಾಮಿ ಭಾವಚಿತ್ರವನ್ನಿರಿಸಿದ ಅಲಂಕೃತ ವಾಹನದೊಂದಿಗೆ ಮೆರವಣಿಗೆ ಹೊರಟು ಕೂಡುರಸ್ತೆಯ ಅಯ್ಯಪ್ಪಸ್ವಾಮಿ ಭಜನಾ ಮಂದಿರ ತಲುಪಲಿದೆ.
ನಂತರ ಕಲ್ಕಂದೂರು ಗ್ರಾಮದ ಶ್ರೀ ಮಹದೇಶ್ವರ ದೇವಾಲಯದಿಂದ ಹೊರಡುವ ಅಯ್ಯಪ್ಪಸ್ವಾಮಿ ಭಾವಚಿತ್ರವನ್ನಿರಿಸಿದ ವಾಹನವು ಕಳಸ ದೀಪಾರಾಧನೆ ಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೂಡುರಸ್ತೆ ಅಯ್ಯಪ್ಪಸ್ವಾಮಿ ಭಜನಾ ಮಂದಿರದಲ್ಲಿ ಸಮಾಪನಗೊಳ್ಳಲಿದೆ. ನಂತರ ಭಜನಾ ಮಂದಿರದಲ್ಲಿ ಮಹಾಮಂಗಳಾರತಿ ನಡೆದು, ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ಜ.15ರಂದು ಮಜ್ಜಿಗೆ ವಿತರಣೆ: ಶ್ರೀ ಶಾಸ್ತ ಯುವಕ ಸಂಘದ ವತಿಯಿಂದ ಜನವರಿ 15ರಂದು ಶಾಂತಳ್ಳಿ ಜಾತ್ರೋತ್ಸವದ ಅಂಗವಾಗಿ ಜಾತ್ರಾ ಮೈದಾನದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆಯನ್ನು ವಿತರಿಸಲಾಗುವದು ಎಂದು ಯುವಕ ಸಂಘದ ಪ್ರಕಟಣೆ ತಿಳಿಸಿದೆ.