ಮಡಿಕೇರಿ, ಡಿ. 30: ಕೊಡಗಿನ ಕುಲಮಾತೆ ಶ್ರೀ ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ; ಈಗಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಏಕಪಕ್ಷೀಯ ನಡೆಯಿಂದ ಗೊಂದಲಗಳು ಹುಟ್ಟಿಕೊಂಡಿದ್ದು, ಇವನ್ನು ನಿವಾರಿಸುವ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿದ್ದಾರೆ.‘ಶಕ್ತಿ’ಗೆ ಈ ಕುರಿತು ಹೇಳಿಕೆ ನೀಡಿರುವ ಅವರು, ಅಷ್ಟಮಂಗಲ ಪ್ರಶ್ನೆಯಲ್ಲಿನ ವಿಷಯಗಳು, ಅಗಸ್ತ್ಯೇಶ್ವರ ಲಿಂಗ ವಿಸರ್ಜನೆ ಸೇರಿದಂತೆ ತೀರ್ಥ ಕುಂಡಿಕೆಯ ಬಳಿ ಪರಂಪರಾಗತವಾಗಿ ಭಕ್ತರು ನಡೆಸಿಕೊಂಡು ಬರುತ್ತಿರುವ ಕುಂಕುಮಾರ್ಚನೆ ಪೂಜೆಯಂತಹ ಸೇವೆಗಳ ಬಗ್ಗೆ ಗೊಂದಲ ಸರಿಯಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಇಂತಹ ವಿಚಾರಗಳಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಧಾರ್ಮಿಕದತ್ತಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಅರಿವಿಗೆ ಬಾರದಂತೆ ತೀರ್ಮಾನ ಕೈಗೊಂಡಿರುವ ಬಗ್ಗೆ ಅನೇಕ ಭಕ್ತರು ತಮ್ಮೊಂದಿಗೆ ದೂರು ನೀಡಿದ್ದು, ಭಕ್ತರ ಭಾವನೆಗಳಿಗೆ ವ್ಯತಿರಿಕ್ತ ವರ್ತನೆ ತೋರದಂತೆ ಬಿ.ಎಸ್. ತಮ್ಮಯ್ಯ ಅವರಿಗೆ ಮೌಖಿಕವಾಗಿ ಸಲಹೆ ನೀಡಿರುವದಾಗಿ ನುಡಿದರು.
(ಮೊದಲ ಪುಟದಿಂದ)
ಆ ಹೊರತಾಗಿಯೂ ಇದೀಗ ಸನ್ನಿಧಿಯ ಭೂಗತ ಶಿವಲಿಂಗ ಹೊರತೆಗೆಸಿ, ಸಮುದ್ರದಲ್ಲಿ ವಿಸರ್ಜಿಸುವಂತಹ ಗೊಂದಲದ ತೀರ್ಮಾನ ಕೈಗೊಳ್ಳುವ ಮುನ್ನ ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಯಾವದೇ ಪೂರ್ವಾನುಮತಿ ಪಡೆದಿಲ್ಲ ಎನ್ನುವದು ತಮ್ಮ ಅರಿವಿಗೆ ಬಂದಿದೆ ಎಂದು ಶಾಸಕರು ನುಡಿದರು. ಇಂತಹ ವಿಚಾರಗಳ ಬಗ್ಗೆ ಚರ್ಚಿಸಿ ಎಲ್ಲರ ಅಭಿಪ್ರಾಯ ಪಡೆಯಲಾಗು ವದು ಎಂದು ಸ್ಪಷ್ಟ ಪಡಿಸಿದ ಅಪ್ಪಚ್ಚುರಂಜನ್; ಭಕ್ತರ ಭಾವನೆಗಳ ವಿರುದ್ಧ ವರ್ತಿಸಿದರೆ, ಪ್ರತಿಭಟನೆಯೂ ಅನಿವಾರ್ಯ ವಾದೀತು ಎಂದರು.ಈ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು, ಭಕ್ತರ ಸಭೆ ನಡೆಸಿ ಒಮ್ಮತದ ತೀರ್ಮಾನ ಅವಶ್ಯಕವೆಂದ ಅವರು, ಆ ಸಲುವಾಗಿ ಸೂಕ್ತ ವೇದಿಕೆಯಡಿ ಚರ್ಚಿಸಲು ಸಂಬಂಧಪಟ್ಟವರು ಮುಂದಾಗಬೇಕೆಂದು ಒತ್ತಾಯಿಸಿದರು.