ಮಡಿಕೇರಿ, ಡಿ. 30: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ಕೊಡಗಿನ ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಮಡಿಕೇರಿ ಮೂಲಕ ಮೂರ್ನಾಡು, ವೀರಾಜಪೇಟೆ ಮಾರ್ಗವಾಗಿ ಮಾಕುಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಮೀಕ್ಷೆ ಮುಂದುವರಿ ದಿದೆ. ಒಟ್ಟು 191 ಕಿ.ಮೀ. ದೂರದ ಈ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಅನುಷ್ಠಾನ ಸಂಬಂಧ, ಅಧಿಕಾರಿಗಳು ಸಮೀಕ್ಷೆ ನಡೆಸುವ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕೇಂದ್ರ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ತಂಡ ಈ ದಿಸೆಯಲ್ಲಿ ಇಂದು ಜಿಲ್ಲೆಯ ಉತ್ತರಗಡಿ ಪ್ರದೇಶ ಶನಿವಾರಸಂತೆ ಮೂಲಕ, ದಕ್ಷಿಣ ಕೊಡಗಿನ ಮಾಕುಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ಪೆರುಂಬಾಡಿ ಗೇಟ್‍ವರೆಗೆ ಖುದ್ದು ಪರಿಶೀಲನೆ ನಡೆಸಿತು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ರಕಾರ, ಕೊಡಗಿನ ಮುಖ್ಯ ಪಟ್ಟಣಗಳೊಂದಿಗೆ ಗ್ರಾಮೀಣ ಭಾಗಗಳಲ್ಲಿ ಹಾದು ಹೋಗಲಿರುವ ಈ ರಸ್ತೆಗೆ, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಯಲಿರುವದಾಗಿ ಸುಳಿವು ಲಭಿಸಿದೆ. ಅಲ್ಲದೆ ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಕೂಡ ಈ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಶಾಸಕರಿಂದ ಪರಿಶೀಲನೆ: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಈಗಾಗಲೇ ಹೆದ್ದಾರಿ ಅಭಿವೃದ್ಧಿ ಸಂಬಂಧ ಕೇಂದ್ರ ಸರಕಾರ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನ ಸೆಳೆದಿರುವದಾಗಿ ಸ್ಪಷ್ಟಪಡಿಸಿದ್ದಾರೆ. ಇಂದು ಸಂಬಂಧಿಸಿದ ಅಧಿಕಾರಿಗಳ ತಂಡದೊಂದಿಗೆ ಅವರು ಖುದ್ದು ಮಾರ್ಗ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ರಸ್ತೆಗಳು ಸಾಕಷ್ಟು ತಿರುವುಗಳಿಂದ ಕೂಡಿದ್ದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ಅಂತಹ ಕಡೆಗಳಲ್ಲಿ ಸಾಧ್ಯವಿರುವ ಮಟ್ಟಿಗೆ ಅಂಕು - ಡೊಂಕುಗಳನ್ನು ಸರಿಪಡಿಸಿ ವಾಹನಗಳ ನೇರ ಸಂಚಾರಕ್ಕೆ ಪೂರಕ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸಲಹೆ ಮಾಡಿರುವದಾಗಿ ನುಡಿದರು.
ವೀರಾಜಪೇಟೆ ಬೈಪಾಸ್: ವೀರಾಜಪೇಟೆ ಪಟ್ಟಣವನ್ನು ಪ್ರವೇಶಿಸುವ ಮುನ್ನ ಕೊಡವ ಸಮಾಜಕ್ಕೆ ತೆರಳುವ ಮಾರ್ಗವಾಗಿ ಒಂದಿಷ್ಟು ಗದ್ದೆ ಬಯಲು ಮೂಲಕ ಬೈಪಾಸ್ ಮಾರ್ಗದೊಂದಿಗೆ ಆರ್ಜಿ ಬೇಟೋಳಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಅವರು ಸುಳಿವು ನೀಡಿದರು.
ಅಧಿಕಾರಿ ಸ್ಪಷ್ಟನೆ: ಕೊಡಗಿನ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ದಿಸೆಯಲ್ಲಿ ಕೇಂದ್ರ ಸರಕಾರದ ಆಶಯದಂತೆ
(ಮೊದಲ ಪುಟದಿಂದ) ಸಮೀಕ್ಷೆ ಕೈಗೊಳ್ಳಲಾಗಿದ್ದು, ಮುಂದೆ ಸಂಬಂಧಿಸಿದ ಹೆದ್ದಾರಿಗೆ ನಿರ್ಧಿಷ್ಟ ಮಾರ್ಗ ಸಂಖ್ಯೆ ಸೇರಿದಂತೆ ಪ್ರಮುಖ ನಿರ್ಧಾರಗಳು ಅಧಿಸೂಚನೆ ಮೂಲಕ ಪ್ರಕಟಗೊಳ್ಳಬೇಕಿದೆ ಎಂದು ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರ ಸುಬ್ರಮಣ್ಯರಾವ್ ಇದೇ ಸಂದರ್ಭ ತಿಳಿಸಿದರು.
ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಉನ್ನತ ಮಟ್ಟದ ಸಭೆಯೊಂದಿಗೆ ಹೆದ್ದಾರಿ ಸಂಬಂಧ ಅಂತಿಮ ರೂಪುರೇಷೆ ಹೊರಬಿದ್ದ ಬಳಿಕ ಕಾಮಗಾರಿ ಆರಂಭಗೊಳ್ಳಲಿರುವದಾಗಿ ಅವರು ಮಾಹಿತಿ ನೀಡಿದರು. ಈ ಸಂದರ್ಭ ಇತರ ಅಧಿಕಾರಿಗಳಾದ ಚಂದ್ರಪ್ಪ, ಹಾಲಪ್ಪ, ಎಲ್‍ಆ್ಯಂಡ್ ಟಿ ತಂತ್ರಜ್ಞ ಜುಬೇರ್ ಸೇರಿದಂತೆ ಶಾಸಕರೊಂದಿಗೆ ಸಿ.ಕೆ. ಬಾಲಕೃಷ್ಣ, ರಾಶಿ, ಸುರೇಶ್, ಲೋಕೇಶ್ ಹಾಜರಿದ್ದರು.