ಮಡಿಕೇರಿ, ಡಿ. 30: ಅಮ್ಮತ್ತಿಯ ಮಿಲನ್ಸ್ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಜನವರಿ 19 ಮತ್ತು 20 ರಂದು 10ನೇ ವರ್ಷದ ರಾಜ್ಯ ಮಟ್ಟದ ಮುಕ್ತ ಏಳು ಮಂದಿ ಆಟಗಾರರ ಫುಟ್ಬಾಲ್ ಪಂದ್ಯಾವಳಿ ಅಮ್ಮತ್ತಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಉಸ್ತುವಾರಿ ಎಂ.ಎಂ. ರಿಜೇಶ್ ಮಾತನಾಡಿ, ಪಂದ್ಯಾವಳಿ ಯಲ್ಲಿ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ ರಾಜ್ಯಗಳ ತಂಡಗಳೂ ಭಾಗವಹಿಸಲಿದ್ದು, ಒಟ್ಟು 16 ತಂಡಗಳಿಗೆ ಸೀಮಿತವಾಗಿ ಪಂದ್ಯಾವಳಿಯನ್ನು ಆಯೋಜಿಸ ಲಾಗಿದೆ. ಯಾವದೇ ತಂಡ ಎಷ್ಟೇ ಸಂಖ್ಯೆಯ ಅತಿಥಿ ಆಟಗಾರರನ್ನು ಆಡಿಸಬಹುದಾಗಿದೆ. ಕೆಲ ತಂಡಗಳಲ್ಲಿ ವಿದೇಶಿ ಆಟಗಾರರು ಪಾಲ್ಗೊಳ್ಳಲಿ ದ್ದಾರೆಂದು ಮಾಹಿತಿಯನ್ನಿತ್ತರು.

ಪಂದ್ಯಾವಳಿಯನ್ನು ಜ.19 ರಂದು ಬೆಳಿಗ್ಗೆ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರು ಉದ್ಘಾಟಿಸಲಿದ್ದು, ಜ. 20 ರ ಸಂಜೆ 4 ಗಂಟೆಗೆ ಅಂತಿಮ ಪಂದ್ಯ ನಡೆಯಲಿದೆ ಎಂದರು. ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. 33,333 ಮತ್ತು ಟ್ರೊಫಿ, ರನ್ನರ್ಸ್ ತಂಡಕ್ಕೆ ರೂ. 22,222 ಮತ್ತು ಟ್ರೋಫಿ ನೀಡಲಾಗುವದು. ಅಲ್ಲದೆ, ಈ ಪಂದ್ಯಾವಳಿಯಲ್ಲಿ ಸಂಗ್ರಹವಾಗುವ ಹಣದಲ್ಲಿ ಒಂದು ಭಾಗವನ್ನು ಕೊಡಗಿನ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ನೀಡಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ವಿ.ಎಸ್. ಚಂದ್ರ, ಸದಸ್ಯರಾದ ಪಿ.ಕೆ. ಶ್ರೀಜಿತ್, ಎಂ.ಎಂ. ವಿನು ಹಾಜರಿದ್ದರು.