ಮಡಿಕೇರಿ, ಡಿ. 30: ಮರ್ಕರ ಯೂತ್ ಕ್ರಿಕೆಟ್ ಕ್ಲಬ್(ಎಂವೈಸಿಸಿ) ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 14 ರಿಂದ 23 ರವರೆಗೆ ಜಿಲ್ಲಾ ಮಟ್ಟದ ಟಿ-20 ಸೀಮಿತ ಓವರ್‍ಗಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಕೆ.ಎಂ. ಉತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಂದ್ಯಾವಳಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ನಾಕ್ ಔಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಕ್ವಾರ್ಟರ್ ಫೈನಲ್‍ಗೆ ಬರುವ 8 ತಂಡಗಳು ಮುಂದಿನ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ನೇರ ಅರ್ಹತೆಯನ್ನು ಪಡೆದುಕೊಳ್ಳ ಲಿರುವದಾಗಿ ಮಾಹಿತಿಯನ್ನಿತ್ತರು.

ಎಂವೈಸಿಸಿಯ ಸದಸ್ಯ ಮತ್ತು ಆಟಗಾರರಾದ ಧ್ರುವ ಮಾತನಾಡಿ, ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲಾ ಮಟ್ಟದ ತಂಡಗಳು ಜನವರಿ 10 ರೊಳಗಾಗಿ ಮೈದಾನ ಶುಲ್ಕ ರೂ. 5 ಸಾವಿರ ಪಾವತಿಸಿ ನೋಂದಾಯಿಸಿಕೊಳ್ಳಬೇಕು. ಸೀಮಿತ ತಂಡಗಳ ನಡುವೆ ಮಾತ್ರ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆಯಲ್ಲಿ ತಂಡಗಳ ಆಯ್ಕೆಯ ಹಕ್ಕನ್ನು ಕ್ಲಬ್ ಕಾಯ್ದಿರಿಸಿಕೊಂಡಿದೆ.

ಪಂದ್ಯಾವಳಿಯ ವಿಜೇತ ಹಾಗೂ ರನ್ನರ್ಸ್ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಪಂದ್ಯ ಪುರುಷ, ಸರಣಿ ಪುರುಷ, ಸರಣಿ ಬ್ಯಾಟ್ಸ್‍ಮನ್, ಸರಣಿ ಬೌಲರ್, ಸರಣಿ ಫೀಲ್ಡರ್ ಮತ್ತು ಉತ್ತಮ ನಡತೆಯ ತಂಡಗಳಿಗೆ ನಿಯಮದಂತೆ ಬಹುಮಾನಗಳನ್ನು ನೀಡಲಾಗುವದು ಎಂದರು.

ಎಂವೈಸಿಸಿ ಕ್ರಿಕೆಟ್ ಸಂಸ್ಥೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಭಾಗಿತ್ವವನ್ನು ಪಡೆದಿದ್ದು, 1984 ರಿಂದ ಪ್ರತಿವರ್ಷ ಇಂತಹ ಪಂದ್ಯಾವಳಿಗಳನ್ನು ನಡೆಸುತ್ತಾ ಬಂದಿದೆ. ಎಲ್ಲಾ ಪಂದ್ಯಾವಳಿಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಟಿ-20 ನಿಯಮಗಳಿಗೆ ಅನುಸಾರ ನಡೆಯಲಿದ್ದು, ಜಿಲ್ಲೆಯ ಆಟಗಾರರಿಗೆ ಉತ್ತೇಜನ ನೀಡುವ ಮತ್ತು ಅನುಭವ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಮೂಲದ ಆಟಗಾರರಿಗೆ ಮತ್ತು ಪ್ರಸಕ್ತ ಜಿಲ್ಲೆಯಲ್ಲಿ ವಾಸಿಸುತ್ತಿರುವ ಆಟಗಾರರಿಗೆ ಸೀಮಿತಗೊಳಿಸಿ ಈ ಪಂದ್ಯಾವಳಿಯಲ್ಲಿ ಆಡಲು ಅವಕಾಶ ನೀಡಲಾಗುತ್ತದೆ ಎಂದ ಅವರು, ಅಗತ್ಯ ಬಿದ್ದಲ್ಲಿ ಆಟಗಾರರು ಸೂಕ್ತ ದಾಖಲೆಗಳನ್ನು ಒದಗಿಸಬೇಕಾ ಗುತ್ತದೆಂದು ತಿಳಿಸಿದರು.

ಪಂದ್ಯಾವಳಿಯ ಬಗ್ಗೆ ಹೆಚ್ಚಿನ ವಿವರಗಳಿಗೆ ಕೆ.ಎಂ. ಉತ್ತಪ್ಪ (ಮೊ. 9480318213), ಪ್ರಿನ್ಸ್ (8660723170) ಅಥವಾ ರಾಜು (8861684348) ಅವರನ್ನು ಸಂಪರ್ಕಿಸಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಎಂ.ಎಂ. ಸುನಿಲ್, ಪ್ರಿನ್ಸ್, ದಿನೇಶ್ ಉಪಸ್ಥಿತರಿದ್ದರು.