ಮಡಿಕೇರಿ, ಡಿ. 29 : ಯುವ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದ ಸುದರ್ಶನ ಅತಿಥಿಗೃಹದ ರಸ್ತೆ ಸಮೀಪ ಸುಮಾರು ಐದು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಯುವ ಭವನವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸದಿದ್ದಲ್ಲಿ ನಿರಂತರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಯುವ ಒಕ್ಕೂಟ ಎಚ್ಚರಿಕೆ ನೀಡಿದೆ. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಿದ ಒಕ್ಕೂಟದ ಪ್ರಮುಖರು ಶೀಘ್ರ ಯುವ ಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿದರು.
ಮಡಿಕೇರಿ ನಗರ ವ್ಯಾಪ್ತಿಯ ಕರ್ಣಂಗೇರಿ ಸರ್ವೆ ನಂ. 512/1 ರಲ್ಲಿ 0.10 ಏಕ್ರೆ ನಿವೇಶನವು 2004ರಲ್ಲಿ ಜಿಲ್ಲಾ ಯುವ ಭವನ ಕಟ್ಟಡ ನಿರ್ಮಾಣಕ್ಕಾಗಿ ಆಗಿನ ಜಿಲ್ಲಾಧಿಕಾರಿ ಗಳು ಮಂಜೂರು ಮಾಡಿದ್ದರು. ಈ ನಿವೇಶನದಲ್ಲಿ ಯುವ ಭವನ ಕಟ್ಟಡ ನಿರ್ಮಾಣಕ್ಕೆ 2005 ರಲ್ಲಿ ಸಂಸದÀ ಸದಾನಂದ ಗೌಡ ಅವರು 1 ಲಕ್ಷ ರೂ. ಅನುದಾನವನ್ನು ನೀಡಿದ್ದರು.
2008 ರಲ್ಲಿ ಯುವ ಭವನದ ನಕಾಶೆಯನ್ನು ಮತ್ತು ಅಂದಾಜು ಪಟ್ಟಿಯನ್ನು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಮತ್ತು ಮಾರ್ಗದರ್ಶನ ದೊಂದಿಗೆ ಅಂದಿನ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಲು ಕೋರಲಾಗಿತ್ತು. ಅದರಂತೆ 2009 ರಲ್ಲಿ ಕಟ್ಟಡದ ನಿರ್ಮಾಣಕ್ಕೆ ರೂ. 31.00 ಲಕ್ಷ ರೂ. ಬಿಡುಗಡೆ ಮಾಡಿದರು.
ಭೂ ಸೇನಾ ನಿಗಮ ನೀಲಿ ನಕಾಶೆಗೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸದೆ, 2013 ಮಾರ್ಚ್ನಲ್ಲಿ ಯುವ ಭವನ ಕಟ್ಟಡವನ್ನು ಹಸ್ತಾಂತರಿಸಲು ತಯಾರಿ ನಡೆಸಿದ್ದರು. ಈ ಸಮಯದಲ್ಲಿ ಯುವ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ನಮ್ಮ ನೀಲಿ ನಕಾಶೆಗೆ ಸರಿಯಾಗಿ ಕೆಲಸ ನಿರ್ವಹಿಸಿರುವದಿಲ್ಲ. ಇದಕ್ಕೆ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿತ್ತು.
2013 ರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರು ಯುವಭವನವನ್ನು 6 ತಿಂಗಳ ಮಟ್ಟಿಗೆ ಮಹಿಳಾ ಕಾಲೇಜ್ಗೆ ಬಿಟ್ಟುಕೊಡಬೇಕೆಂದು ಮನವಿ ಮಾಡಿದಲ್ಲದೆ ಉಳಿದಿರುವ ಕೆಲಸ, ಕಾರ್ಯಗಳನ್ನು ಶಾಸಕರ ನಿಧಿಯಿಂದ ಮಾಡಿಕೊಡುವದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಯುವ ಒಕ್ಕೂಟ ಮಹಿಳಾ ಕಾಲೇಜು ನಡೆಸಲು ಮೌಖಿಕ ಒಪ್ಪಿಗೆ ನೀಡಿತು. ಆದರೆ 5 ವರ್ಷ ಕಳೆದರೂ ಯುವ ಜನತೆಯ ಕಾರ್ಯ ಚಟುವಟಿಕೆಗೆ ಯುವಭವನ ಕಟ್ಟಡವನ್ನು ಬಿಟ್ಟುಕೊಡದೇ ಸತಾಯಿಸಲಾಗುತ್ತಿದೆ ಎಂದು ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ಬೇಸರ ವ್ಯಕ್ತಪಡಿಸಿದರು.
ವಿವಿಧ ತರಬೇತಿ ಮತ್ತು ಶಿಬಿರಗಳನ್ನು ಆಯೋಜಿಸುವದು, ಕಾರ್ಯಾಗಾರ ಯುವ ಸಮ್ಮೇಳನ ಮತ್ತು ತಾಲೂಕಿನ ಯುವಜನ ಮೇಳ, ಜಿಲ್ಲಾ ಯುವಜನೋತ್ಸವ, ಗ್ರಾಮೀಣ ಕ್ರೀಡಾಕೂಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಯುವಜನರಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಈ ಯುವ ಭವನ ಕಟ್ಟಡ ಹೆಚ್ಚು ಸಹಕಾರಿಯಾಗಿದೆ. ಒಂದೂವರೆ ವರ್ಷಗಳ ಹಿಂದೆಯೂ ಪ್ರತಿಭಟನೆ ನಡೆಸಿ, ಈ ಹಿಂದಿನ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿ ಭವನವನ್ನು ಹಸ್ತಾಂತರಿಸುವಂತೆ ಒತ್ತಾಯಿಸ ಲಾಗಿತ್ತು. ಆದರೆ ಇಲ್ಲಿಯವರೆಗೆ ಭವನ ಯುವ ಒಕ್ಕೂಟದ ಅಧೀನಕ್ಕೆ ಬಂದಿಲ್ಲ. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಯುವ ಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟುಕೊಡದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸು ವದಾಗಿ ಸುಕುಮಾರ್ ಎಚ್ಚರಿಕೆ ನೀಡಿದರು.
ಒಕ್ಕೂಟದ ಉಪಾಧ್ಯಕ್ಷರಾದ ಎಸ್.ಟಿ. ಗಿರೀಶ್, ಎನ್.ಎಂ. ದಿವಾಕರ್, ಖಜಾಂಚಿ ಕೆ.ಎಂ. ಮೋಹನ್, ಕಾರ್ಯದರ್ಶಿ ಕೆ.ಕೆ.ಗಣೇಶ, ಸಹಕಾರ್ಯದರ್ಶಿ ಆದರ್ಶ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷÀ ನವೀನ್ ದೇರಳ, ಕಾರ್ಯದರ್ಶಿ ದಿಲೀಪ್ ಕುಮಾರ್, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಚಂದ್ರಿಕಾ, ಸದಸ್ಯರಾದ ಹರೀಶ್, ನೇತ್ರಾವತಿ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.