ಸೋಮವಾರಪೇಟೆ, ಡಿ.29 : ಹಿಂದೂಗಳ ಆರಾಧ್ಯ ದೈವ ಶ್ರೀರಾಮ, ಸೀತೆ ಬಗ್ಗೆ ಸಾಹಿತಿ ಭಗವಾನ್ ಅವರು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಭಗವಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶ್ರೀರಾಮ ಮಂದಿರ ಏಕೆ ಬೇಡ ಎಂಬ ಪುಸ್ತಕದಲ್ಲಿ ಭಗವಾನ್ ಅವರು, ಹಿಂದೂಗಳ ಪೂಜನೀಯ ದೇವರುಗಳನ್ನು ಕೀಳುಮಟ್ಟದಲ್ಲಿ ಬಿಂಬಿಸಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಹಿಂದೆಯೂ ಭಗವಾನ್ ಅವರು ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಲು ಯತ್ನಿಸುತ್ತಿರುವ ಇವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತೀವ್ರತರದ ಪ್ರತಿಭಟನೆ ನಡೆಸಲಾಗುವದು ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು ಸೇರಿದಂತೆ ಪದಾಧಿಕಾರಿಗಳು ಎಚ್ಚರಿಸಿದರು.
ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು ದೂರಿನ ಪ್ರತಿ ಸ್ವೀಕರಿಸಿ, ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದರು. ಪ.ಪಂ. ಸದಸ್ಯ ಬಿ.ಆರ್. ಮಹೇಶ್, ಬಿಜೆಪಿ ಯುವ ಮೋರ್ಚಾದ ನಗರಾಧ್ಯಕ್ಷ ಶರತ್ಚಂದ್ರ, ಪದಾಧಿಕಾರಿಗಳಾದ ಕೊಮಾರಿ ಸತೀಶ್, ಜಗದೀಶ್, ಆನಂದ, ಪ್ರವೀಣ್, ಮುರುಳಿ, ಪ್ರಸನ್ನ ನಾಯರ್, ಕೆ.ಕೆ. ಸುಧಾಕರ್, ಮಹೇಶ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.