ಸೋಮವಾರಪೇಟೆ, ಡಿ. 29: ಪೌಷ್ಟಿಕ ಆಹಾರ ಸೇವಿಸುವ ಕುರಿತು ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ವತಿಯಿಂದ ತಾಲೂಕಿನ ಆಲೂರು-ಸಿದ್ದಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಡಾ. ಸುಪರ್ಣಾ ಕೃಷ್ಣಾನಂದ ಚಾಲನೆ ನೀಡಿ ಮಾತನಾಡಿ, ಎಲ್ಲ ಗರ್ಭಿಣಿಯರು, ಬಾಣಂತಿಯರು ಕಾಲ ಕಾಲಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಬಳಸಬೇಕು. ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಕಲಾ ವೇದಿಕೆಯ ರಾಜು ಮತ್ತು ತಂಡದವರು, ಸರ್ಕಾರದಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುತ್ತಿರುವ ಹಲವು ಸೌಲಭ್ಯಗಳು, ಪೌಷ್ಟಿಕಾಂಶ ಸೇವನೆ, ಸ್ನೇಹ ಕ್ಲೀನಿಕ್, 108, 104 ಹಾಗೂ ನಗು ಮಗು ವಾಹನ ಸೌಲಭ್ಯಗಳು ಸೇರಿದಂತೆ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಶುಶ್ರೂಷಕಿ ನಮಿತಾ, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯ ಕರ್ತೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.