ಮಡಿಕೇರಿ, ಡಿ. 29: ದೇಶಾದ್ಯಂತ ತಾ. 29 ರಿಂದ ಜಾರಿಗೆ ಬರಬೇಕಿದ್ದ ಕೇಬಲ್ ಟಿ.ವಿ. ಸೇವೆಗಳ ಹೊಸ ದರ ನಿಯಂತ್ರಣ ವ್ಯವಸ್ಥೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) 2019, ಜ. 31 ರವರೆಗೆ ವಿಸ್ತರಿಸಿದೆ. ಇದರಿಂದ ಗ್ರಾಹಕರು ಹೊಸ ವ್ಯವಸ್ಥೆಗೆ ವರ್ಗಾವಣೆಗೊಳ್ಳಲು ತಿಂಗಳು ಕಾಲಾವಕಾಶ ದೊರಕಿದ್ದು, ಕೇಬಲ್ ಆಪರೇಟರ್‍ಗಳು ಹಾಗೂ ಎಂ.ಎಸ್.ಓ.ಗಳು ಸ್ವಲ್ಪ ನಿರಾಳರಾಗಿದ್ದಾರೆ.

ಏಕಾಏಕಿ ಹೊಸ ವ್ಯವಸ್ಥೆಗೆ ವರ್ಗಾವಣೆ ಮಾಡಲು ಹೋದರೆ ಗೊಂದಲ ಸೃಷ್ಟಿಯಾಗಿ ಸೇವೆಯಲ್ಲಿ ವ್ಯತ್ಯಯವಾದರೆ ಗ್ರಾಹಕರಿಗೆ ತೊಂದರೆ ಆಗಲಿದೆ ಎಂದು ಟ್ರಾಯ್, ಕೇಬಲ್ ಆಪರೇಟರ್ ಮತ್ತು ಮಲ್ಪಿಸಿಸ್ಟಂ ಆಪರೇಟರ್ (ಎಂ.ಎಸ್.ಒ.)ಗಳ ಜೊತೆ ಸರಣಿ ಸಭೆಗಳನ್ನು ನಡೆಸಿದ ಬಳಿಕ ಅವಧಿಯನ್ನು ಜ. 31 ರವರೆಗೆ ವಿಸ್ತರಿಸಲು ತೀರ್ಮಾನಿಸಿದೆ ಎಂದು ಟ್ರಾಯ್‍ನ ಕಾರ್ಯದರ್ಶಿ ಎಸ್.ಕೆ. ಗುಪ್ತಾ ಶುಕ್ರವಾರ ಪ್ರಕಟಿಸಿದರು. ಹಳೆಯ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುವದು. ಗ್ರಾಹಕರು ಹೊಸ ವ್ಯವಸ್ಥೆಗೆ ವರ್ಗಾವಣೆಯಾಗುವವರೆಗೆ ಹಳೆಯ ದರವನ್ನೇ ವಿಧಿಸಬೇಕು ಎಂದು ಟ್ರಾಯ್ ತನ್ನ ಆದೇಶದಲ್ಲಿ ತಿಳಿಸಿದೆ.

ದರಪಟ್ಟಿ ಬಹುತೇಕ ಸಿದ್ಧ: ಎಂ.ಎಸ್.ಒ.ಗಳ ಬಹುತೇಕ ದರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅವುಗಳನ್ನು ಕೇಬಲ್ ಆಪರೇಟರ್ ಮೂಲಕ ಗ್ರಾಹಕರಿಗೆ ನೀಡಲಾಗುವದು. ಗ್ರಾಹಕರು ಯಾವ ಚಾನೆಲ್, ಎಷ್ಟು ಚಾನೆಲ್ ಕೇಳುತ್ತಾರೋ ಅದಕ್ಕೆ ತಕ್ಕಂತೆ ದರ ಏರಿಕೆಯಾಗುತ್ತದೆ. ಕನಿಷ್ಟ ದರ ರೂ. 130 ನೀಡಲೇಬೇಕು. ಅದರ ಜೊತೆಗೆ ಶೇ. 18 ಜಿ.ಎಸ್.ಟಿ. ತೆರಿಗೆ. ಹೊಸ ದರ ಜಾರಿ ನಂತರ ಯಾರ್ಯಾರು ಸೆಟ್‍ಟಾಪ್ ಬಾಕ್ಸ್ ಸಂಪರ್ಕಗಳನ್ನು ಹೊಂದಿದ್ದಾರೋ ಅವರೆಲ್ಲಾ ಕನಿಷ್ಟ ರೂ. 130 ಮತ್ತು ಶೇ. 18 ರಷ್ಟು ಜಿ.ಎಸ್.ಟಿ. ತೆರಿಗೆ ಪಾವತಿಸಿ 100 ಫ್ರೀ ಟು ಏರ್ ಚಾನೆಲ್ ಪಡೆಯಬಹುದು.

ಇದರಲ್ಲಿ ದೂರದರ್ಶನದ ಎಲ್ಲಾ ವಾಹಿನಿಗಳು, ಜೊತೆಗೆ ನ್ಯೂಸ್ ಚಾನಲ್‍ಗಳು ಲಭ್ಯವಿರುತ್ತದೆ. ಉಳಿದಂತೆ ಕನ್ನಡದ ವಾಹಿನಿಗಳು ಬೇಕೆಂದರೆ ಅವುಗಳನ್ನು ಆಯ್ದುಕೊಂಡು ಅವುಗಳಿಗೆ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಅದೇ ರೀತಿ ತೆಲುಗು, ತಮಿಳು, ಹಿಂದಿ ಅಥವಾ ಇನ್ಯಾವದೇ ಭಾಷೆಯ ಅಥವಾ ಕ್ರೀಡಾ ಚಾನೆಲ್ ಬೇಕೆಂದರೆ ಆಯಾ ಚಾನಲ್‍ಗಳಿಗೆ ತಗಲುವ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎನ್ನುತ್ತಾರೆ ಕೇಬಲ್ ಆಪರೇಟರ್‍ಗಳು.