ಮಡಿಕೇರಿ, ಡಿ. 29: ಕೇರಳ ರಾಜ್ಯದ ಕಾಸರಗೋಡಿನಿಂದ ಮಡಿಕೇರಿ ಕಡೆಗೆ ಪ್ರವಾಸಿಗರನ್ನು ಕರೆತರುತ್ತಿದ್ದ ಟಿ.ಟಿ. ವ್ಯಾನ್ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. (ಮೊದಲ ಪುಟದಿಂದ) ಕೇರಳ ರಾಜ್ಯದ ನೋಂದಣಿ ಹೊಂದಿರುವ (ಏಐ27 ಃ 2621) ಟಿ.ಟಿ. ವ್ಯಾನ್ ಇಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕಾಸರಗೋಡಿನಿಂದ ಮಡಿಕೇರಿಗೆ 14 ಮಂದಿ ಪ್ರವಾಸಿಗರನ್ನು ಕರೆತರುತ್ತಿತ್ತು. ಮಾರ್ಗಮಧ್ಯದ ಜೋಡುಪಾಲ - ದೇವರಕೊಲ್ಲಿ ನಡುವೆ ವ್ಯಾನ್ ನ ಬಾನೆಟ್ ನಲ್ಲಿ ಹೊಗೆ ಬರಲಾರಂಭಿಸಿದೆ. ಇದನ್ನರಿತ ಚಾಲಕ ವ್ಯಾನ್ ಅನ್ನು ರಸ್ತೆ ಬದಿ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ಬಾನೆಟ್ ತೆರೆದಿದ್ದಾನೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಯ ಕೆನ್ನಾಲಿಗೆಗೆ ಸಿಲುಕಿ ವ್ಯಾನಿನ ಬಹುಭಾಗ ಸುಟ್ಟುಕರಕಲಾಗಿದೆ. ಅದೃಷ್ಟವಶಾತ್ ಮೊದಲೇ ವ್ಯಾನ್ ನಲ್ಲಿದ್ದವರನ್ನು ಕೆಳಗಿಸಿದ್ದರಿಂದ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಅಕಸ್ಮಾತ್ ವ್ಯಾನ್ ಚಲಿಸುತ್ತಿದ್ದಾಗಲೇ ಬೆಂಕಿಹೊತ್ತಿಕೊಂಡಿದ್ದಲ್ಲಿ ಭಾರೀ ಪ್ರಾಣಹಾನಿ ಉಂಟಾಗುವ ಸಾಧ್ಯತೆಯಿತ್ತು. ವಿಷಯವರಿತ ಮಡಿಕೇರಿ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ತೆರಳಿ ಉರಿಯುತ್ತಿದ್ದ ವ್ಯಾನ್‍ನ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.