ಮಡಿಕೇರಿ, ಡಿ. 29: ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಎಲ್ಲಾ ಆದಿವಾಸಿ ಜನತೆಗೆ ಸ್ವಂತ ಬದುಕು ರೂಪಿಸಿಕೊಳ್ಳಲು ಕೃಷಿ ಜಮೀನು ಸಹಿತ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಘಟಕ ಆಗ್ರಹಿಸಿದೆ.
ಇಲ್ಲಿನ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಜಿಲ್ಲಾಡಳಿತ ಭವನದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ ಆದಿವಾಸಿಗಳು, ಪ್ರಮುಖ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಇಂದು ಮನವಿ ಸಲ್ಲಿಸಿದರು. ಕೊಡಗಿನ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿರುವ ಆದಿವಾಸಿಗಳ ಸಹಿತ ಜನಾಂಗದ ಎಲ್ಲರಿಗೆ ವಸತಿ ಮತ್ತು ಕೃಷಿ ಜಮೀನು ಕಲ್ಪಿಸಬೇಕೆಂದು ಗಮನ ಸೆಳೆದರು.
ಆದಿವಾಸಿ ಕುಟುಂಬಗಳಿಗೆ ಪಡಿತರ, ಸಾಲ ಸೌಲಭ್ಯ, ವಸತಿ, ಶಿಕ್ಷಣ, ಆಧಾರ್ ಸೇರಿದಂತೆ ಇತರ ದಾಖಲಾತಿಗಳನ್ನು ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಿದರು. ಅಲ್ಲದೆ, ಮಾಲೀಕರುಗಳ ಹಿಡಿತದಿಂದ ಕಾರ್ಮಿಕರಿಗೆ ಮುಕ್ತ ಬದುಕು ಕಲ್ಪಿಸುವದರೊಂದಿಗೆ, ಕಾರ್ಮಿಕರ ಮಕ್ಕಳನ್ನು ದುಡಿಸಿಕೊಳ್ಳದೆ, ಶಿಕ್ಷಣ ಒದಗಿಸಲು ಆಗ್ರಹಪಡಿಸಿದರು. ಜನಾಂಗದ ಅಧ್ಯಕ್ಷ ರವಿ, ಪದಾಧಿಕಾರಿಗಳಾದ ಗಣೇಶ್ ವೈ.ಕೆ., ಪ್ರೇಮ, ನ್ಯಾನ್ಸಿ, ಗುರುರಾಜ್ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.