ಮಡಿಕೇರಿ, ಡಿ. 29: ವಿಶ್ವಮಾನವತೆಯ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರಿಗೆ ಕವನಗಳ ಮೂಲಕ ನಮನ ಸಲ್ಲಿಸಲಾಯಿತು. ಜಿಲ್ಲೆಯ ಹಿರಿ-ಕಿರಿಯ ಕವಿಗಳು ಮನಸಿನೊಳಗಿರುವ ಕುವೆಂಪು ಅವರ ಬಗೆಗಿನ ಭಾವನೆಗಳು, ಆಶಯಗಳು ಪದಗಳ ಸರಮಾಲೆಯಾಗಿ ಹೊರಹೊಮ್ಮಿ ಕುವೆಂಪು ಮತ್ತೊಮ್ಮೆ ಹುಟ್ಟಿ ಬರಲೆಂಬ ಅಭಿಲಾಷೆಗಳು ವ್ಯಕ್ತಗೊಂಡವು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಕೊಡಗು ಪತ್ರಿಕಾಭವನ ಟ್ರಸ್ಟ್‍ನ ಸಹಯೋಗದೊಂದಿಗೆ ಪತ್ರಿಕಾಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ 114ನೇ ಜನ್ಮ ದಿನಾಚರಣೆ ಸಂಬಂಧ ‘ವಿಶ್ವಮಾನವ ಸಂದೇಶ’ ಧ್ಯೇಯವಾಕ್ಯದೊಂದಿಗೆ ಆಯೋಜಿತವಾಗಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳು ತಮ್ಮದೇ ಧಾಟಿಯಲ್ಲಿ ಕುವೆಂಪು ಅವರ ಬಗ್ಗೆ; ಅವರ ಸಾಹಿತ್ಯ, ಕವನ, ವೈಚಾರಿಕತೆಗಳನ್ನು ಕಟ್ಟಿಕೊಟ್ಟರು. ಇನ್ನು ಕೆಲವರು ಜಾತಿ, ಧರ್ಮ, ಹುಟ್ಟು, ಸಾವು, ಜೀವನ, ಸಮಾಜದ ಅನಿಷ್ಟಗಳ ಬಗ್ಗೆಯೂ ತೆರೆದಿಟ್ಟರು.
ಕಾರ್ಯಕ್ರಮವನ್ನು ಹಿರಿಯ ನಾಗರಿಕ ವೇದಿಕೆ ಮಾಜಿ ಅಧ್ಯಕ್ಷ ಜಿ.ಟಿ. ರಾಘವೇಂದ್ರ ಅವರು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರಿಗೆ ಕವನಗಳ ಮೂಲಕ ನುಡಿನಮನ ಸಲ್ಲಿಸುವ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಿಳಿಸಿದರು.
ಅತಿಥಿಗಳಾಗಿದ್ದ ಪತ್ರಿಕಾಭವನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಮಾತನಾಡಿ, ಕುವೆಂಪು ಅವರು ಸಾಹಿತಿಯಾಗಿ ಇತರರನ್ನು ಪ್ರೇರೇಪಿಸಿದ್ದರು; ಅವರ ವಿಶ್ವಮಾನವಾತಾವಾದ ಇಂದು ಅತ್ಯಗತ್ಯವಾಗಿದೆ ಎಂದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ಅವರು; ಕನ್ನಡದಲ್ಲಿ ಬೃಹತ್ ಕಾವ್ಯ ಬರುವದಿಲ್ಲ ಮಾತನ್ನು ರಾಮಾಯಣಂ ದರ್ಶನಂ ರಚಿಸುವ ಮೂಲಕ ಹೋಗಲಾಡಿಸಿದವರು ಕುವೆಂಪು. ಅವರು ಅವರ ಆದರ್ಶ ಇಂದಿಗೆ ಅತ್ಯಗತ್ಯವಾಗಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕ, ಯುವಕವಿ ಕಾಜೂರು ಸತೀಶ್ ಮಾತನಾಡಿ, ಕುವೆಂಪು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ನವೋದಯದ ಒಳಗಡೆ ಅಧ್ಯಯನ ಮಾಡಿದ್ದಾರೆ. ಅವರು ಪರಂಪರೆಯನ್ನು ತಿರಸ್ಕರಿಸಲಿಲ್ಲ, ಬದಲಿಗೆ ತಿದ್ದಿ ತೀಡಿದವರು. ಜಾತಿ ಪದ್ಧತಿಯನ್ನು ಶೋಷಣೆಯನ್ನು ವಿರೋಧಿಸಿದವರು. ಎಲ್ಲ ದಾರ್ಶನಿಕರನ್ನು ತನ್ನೊಳಗೆ ಸೇರಿಸಿಕೊಂಡ ಮಹಾನ್ ಕವಿಯಾಗಿದ್ದವರೆಂದು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಳಗದ ಸ್ಥಾಪಕಾಧ್ಯಕ್ಷ ಬಿ.ಎ. ಷಂಶುದ್ದೀನ್ ಅವರು; ಕುವೆಂಪು ಅವರ ಆಶಯ ಹೊಂದಿರುವವರು ಈಗಲೂ ಇದ್ದಾರೆ. ಆದರೂ ಸಮಾಜದಲ್ಲಿ ಈ ರೀತಿಯ ಕ್ಷೋಭೆ ಉಂಟಾಗುತ್ತಿರುವದಕ್ಕೆ ವಿಷಾದಿಸಿದರು. ಪ್ರಸ್ತುತ ಮನಸುಗಳ ನಡುವೆ ಇರುವ ಗೋಡೆಗಳನ್ನು ಒಡೆದು ಹೃದಯಗಳನ್ನು ಬೆಸೆಯುವ ಕಾರ್ಯವಾಗಬೇಕಿದೆ. ಜಡ್ಡುಗಟ್ಟಿದ್ದ ಸಾಂಪ್ರದಾಯಕ ಕೊಳೆಯನ್ನು ಜಾಲಾಡಿಸಿ, ವೈಚಾರಿಕತೆಯನ್ನು ಹೊರತರಬೇಕು. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳವದು ಮುಖ್ಯವಾಗಿದೆ ಎಂದರು.
ಕವಿಗಳು ನಮ್ಮ ಸಮಾಜ ಯಾವ ರೀತಿ ಇದೆ, ಮುಂದೆ ಏನು ಮಾಡಬೇಕು, ಯಾವ ರೀತಿ ಮಾಡಬೇಕೆಂಬ ಚಿಂತನೆ ಹೊಂದಿರಬೇಕು. ಇಂತಹ ಕಾರ್ಯಕ್ಕೆ ಬಳಗ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು. ಈ ಸಂದರ್ಭ ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ ಇದ್ದರು.
ಭಾಗವಹಿಸಿದ್ದ ಕವಿಗಳು
ಕವಿಗೋಷ್ಠಿಯಲ್ಲಿ ಜಿಲ್ಲೆಯ ಕವಿಗಳಾದ ನಾಗೇಶ್ ಕಾಲೂರು, ಪೂ.ರ. ಶ್ರೀನಿವಾಸ್, ಕಿಗ್ಗಾಲು ಗಿರೀಶ್, ಕೆ. ಜಯಲಕ್ಷ್ಮಿ, ಬಿ.ಆರ್. ಜೋಯಪ್ಪ, ಕೆ.ಆರ್. ವಿದ್ಯಾಧರ್, ಸುಕುಮಾರ್ ತೊರೆನೂರು, ಎಂ.ಎ. ರುಬೀನ, ಎಸ್.ಕೆ. ಮಾಲಾದೇವಿ, ಡಾ. ಜೆ. ಸೋಮಣ್ಣ, ಲೀಲಾಕುಮಾರಿ ತೊಡಿಕಾನ, ವಿ.ಎನ್. ರಂಜಿತಾ, ಪುಷ್ಪಲತಾ ಶಿವಪ್ಪ, ವಿಮಲ ದಶರಥ, ನಾ ಕನ್ನಡಿಗ, ಸುನಿತಾ ಪ್ರೀತು. ಎಸ್.ಕೆ. ಈಶ್ವರಿ, ಕೆ.ಜಿ. ರಮ್ಯ ಅವರುಗಳು ಕವನ ವಾಚನ ಮಾಡಿದರು.
ಎಸ್.ಐ. ಮುನೀರ್ ಅಹ್ಮದ್ ನಿರೂಪಿಸಿದರೆ, ಗಾಯಕ ಲಿಯಾಕತ್ ಆಲಿ ನಾಡಗೀತೆ ಹಾಡಿದರು. ಪತ್ರಕರ್ತ ಎಸ್.ಜಿ. ಉಮೇಶ್ ಸ್ವಾಗತಿಸಿದರೆ, ಬಳಗದ ಖಜಾಂಚಿ ರಾಜೇಶ್ ಪದ್ಮನಾಭ ವಂದಿಸಿದರು. - ಸಂತೋಷ್