ಮಡಿಕೇರಿ, ಡಿ. 29: ಸಾಮಾಜಿಕ ಜಾಲತಾಣದಲ್ಲಿ ಯೇಸುವಿನ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನಿಸಿರುವ ವಿಚಾರವನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ. ಸಮಾಜದಲ್ಲಿ ಈ ರೀತಿಯ ವರ್ತನೆಯಿಂದ ಅಶಾಂತಿಯ ವಾತಾವರಣ ಮೂಡಿಸುವದರೊಂದಿಗೆ ಸಾಮರಸ್ಯ ಕದಡಲು ಯತ್ನಿಸಿರುವವರನ್ನು ಕೂಡಲೇ ಬಂಧಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಧರ್ಮದ ಬಗ್ಗೆ, ಆ ಧರ್ಮದ ಧರ್ಮಗುರುಗಳ ಬಗ್ಗೆ ಅವಹೇಳನ ಮಾಡುವಂತಹ ಕೃತ್ಯ ಖಂಡನೀಯ. ಇದು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವಂತಹ ವಿಚಾರವಾಗಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸಮಾಜದ ಸತ್ಪ್ರಜೆಗಳು ಇದಕ್ಕೆ ಸೊಪ್ಪು ಹಾಕದೆ ಶಾಂತಿ- ಸಾಮರಸ್ಯ ಕಾಪಾಡಬೇಕೆಂದು ಅವರು ಮನವಿ ಮಾಡಿದ್ದಾರೆ.