ಮಡಿಕೇರಿ, ಡಿ.29: ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ಕಾರ್ಪ್ ಕಿರಣ್ ಯೋಜನೆಯಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 10 ಗಣಕಯಂತ್ರಗಳನ್ನು ವಿತರಿಸಲಾಯಿತು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಗಣಕಯಂತ್ರಗಳನ್ನು ವಿತರಿಸಿ ಮಾತನಾಡಿ ಕಾರ್ಪೊರೇಷನ್ ಬ್ಯಾಂಕ್ನ ಸಾಮಾಜಿಕ ಕಳಕಳಿಯು ತುಂಬಾ ಖುಷಿ ತಂದಿದೆ. ಕಾಲೇಜಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಕಂಪ್ಯೂಟರ್ ಕಲಿಕೆ ಅವಶ್ಯವಿದ್ದು, ಈ ದಿಸೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ ತಂದು ವಿದ್ಯಾಭ್ಯಾಸದಲ್ಲಿ ಉತ್ತಮ ಸ್ಥಾನಕ್ಕೇರಬೇಕೆಂದು ಕಿವಿಮಾತು ಹೇಳಿದರು.
ಕಾರ್ಪೋರೇಷನ್ ಬ್ಯಾಂಕ್ನ ಡಿ.ಜಿ.ಎಂ ಎಸ್.ಎಲ್ ಗಣಪತಿ ಅವರು ಮಾತನಾಡಿ, ಕಾರ್ಪೋರೇಷನ್ ಬ್ಯಾಂಕ್ಗೆ 112 ವರ್ಷಗಳ ಇತಿಹಾಸವಿದ್ದು, ಬ್ಯಾಂಕಿಂಗ್ ಚಟುವಟಿಕೆಯಿಂದ ಬಂದ ಲಾಭಾಂಶದಲ್ಲಿ ಒಂದು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿರುವದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.
ಕಾರ್ಪ್ ಕಿರಣ್ ಯೋಜನೆಯಡಿ 10 ಗಣಕಯಂತ್ರಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನೀಡುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಉಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ವೃದ್ದಾಶ್ರಮ, ವಿಕಲಚೇತನರಿಗೆ ಸಹಾಯ ಹಸ್ತ, ಶಾಲಾ - ಕಾಲೇಜುಗಳಿಗೆ ಪಠ್ಯ ಚಟುವಟಿಕೆಗಳಿಗೆ ಅಗತ್ಯವಿರುವ ಕಾರ್ಯ ಮಾಡುತ್ತಿರುವದಾಗಿ ಅವರು ತಿಳಿಸಿದರು.
ನಬಾರ್ಡ್ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ. ನಾಣಯ್ಯ ಅವರು ಮಾತನಾಡಿ ಕಾರ್ಪೊರೇಷನ್ ಬ್ಯಾಂಕ್ ವತಿಯಿಂದ ಶೈಕ್ಷಣಿಕ ಸಂಸ್ಥೆಗಳಿಗೆ ಹತ್ತು ಹಲವು ಸಹಕಾರ ನೀಡುತ್ತಿರುವದು ಸಂತಸದ ವಿಚಾರವಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತಿಸಬೇಕು. ಇದರಿಂದ ಸಮಾಜ ಹಾಗೂ ರಾಷ್ಟ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.
ಕಾರ್ಪೋರೇಷನ್ ಬ್ಯಾಂಕ್ನ ಕಾಪ್ಸೆಟ್ ತರಬೇತಿ ಸಂಸ್ಥೆಯ ಮುಖ್ಯ ಪ್ರಬಂಧಕರಾದ ಡಾ.ಸುರೇಶ್ ಅವರು ಕಾಪ್ಸೆಟ್ ವತಿಯಿಂದ ನೀಡಲಾಗುತ್ತಿರುವ ಉಚಿತ ತರಬೇತಿ ಹಾಗೂ ಸ್ವಾವಲಂಭಿ ಬದುಕಿಗೆ ಸ್ವ-ಉದ್ಯೋಗ ಪಡೆಯಲು ನಡೆಸುತ್ತಿರುವ ತರಬೇತಿಯ ಕುರಿತು ಮಾಹಿತಿ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಕೆಂಚಪ್ಪ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗುಪ್ತಾಜಿ, ಕಾರ್ಪೊರೇಷನ್ ಬ್ಯಾಂಕ್ನ ವಲಯ ವ್ಯವಸ್ಥಾಪಕರಾದ ದ್ವಾರಕೀನಾಥ್, ಕಾರ್ಪೊರೇಷನ್ ಬ್ಯಾಂಕ್ನ ವ್ಯವಸ್ಥಾಪಕರಾದ ಆಂಟೋನಿ, ಲೀಡ್ ಬ್ಯಾಂಕ್ನ ಸಹಾಯಕ ಪ್ರಬಂಧಕರಾದ ರಾಮಚಂದ್ರ ನಾಯಕ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಧನಂಜಯ, ಪ್ರಾಂಶುಪಾಲರಾದ ಪಿ.ಆರ್.ವಿಜಯ ಇತರರು ಇದ್ದರು.