ಸೋಮವಾರಪೇಟೆ, ಡಿ. 27: ಪ್ರಸ್ತುತ ಬೆಂಗಳೂರಿನ ಇಂದಿರಾನಗರದ ಸಿ.ವಿ. ರಾಮನ್ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿರುವ ಮೂಲತಃ ಸೋಮವಾರಪೇಟೆಯ ಹರಗ ಗ್ರಾಮ ನಿವಾಸಿ ಹೆಚ್.ಪಿ. ಹೇಮಾವತಿ ಪರಮೇಶ್‍ಗೌಡ ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಲಭಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಂಗ್ಲೋ ಇಂಡಿಯನ್ ಯುನಿಟಿ ಸೆಂಟರ್ ಆಶ್ರಯದಲ್ಲಿ ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಆಸ್ಪತ್ರೆ ಸೇರಿದಂತೆ ಬೆಂಗಳೂರಿನ ಗ್ರಾಮೀಣ ಭಾಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು, ರಾಜ್ಯದ ಒಟ್ಟು 6 ಮಂದಿ ಶುಶ್ರೂಷಕಿಯರು ಪ್ರಶಸ್ತಿ ಸ್ವೀಕರಿಸಿದರು. ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಹೇಮಾವತಿ ಅವರು ಪತ್ರಿಕೆಯೊಂದಿಗೆ ಹಂಚಿಕೊಂಡರು.

ಕಳೆದ 24 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೇಮಾವತಿ ಅವರು, ಸೋಮವಾರಪೇಟೆ ಸಮೀಪದ ಶಾಂತಳ್ಳಿ ಹೋಬಳಿ, ಹರಗ ಗ್ರಾಮದ ಹೆಮ್ಮೆಟ್ಟಿರಮನೆ ಪೊನ್ನಪ್ಪ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ಸಿ.ವಿ. ರಾಮನ್ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.