ಗೋಣಿಕೊಪ್ಪ ವರದಿ, ಡಿ. 27: ಮನೆ, ಕೊಟ್ಟಿಗೆಗೆ ಬಾರದಂತೆ ಸಾಕು ನಾಯಿಯೊಂದು ಮನೆಯಂಗಳದಲ್ಲಿ ಕಾಳಿಂಗ ಸರ್ಪವನ್ನು ತಡೆಹಿಡಿದಿದ್ದು ಅದನ್ನು ಅರಣ್ಯಕ್ಕೆ ಬಿಟ್ಟ ಘಟನೆ ಬೀರುಗ ಗ್ರಾಮದಲ್ಲಿ ನಡೆದಿದೆ.
ಸುಮಾರು 12 ಅಡಿ ಉದ್ದವಿದ್ದ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಕುಂಞಂಗಡ ಬೋಸ್ ಮಾದಪ್ಪ ಹಿಡಿದು, ಬ್ರಹ್ಮಗಿರಿ ಅರಣ್ಯಕ್ಕೆ ಬಿಟ್ಟರು.
ಮುಂಜಾನೆ 4 ಗಂಟೆ ಸುಮಾರಿಗೆ ಬೀರುಗ ಗ್ರಾಮದ ರವಿಪೂಜಾರಿ ಎಂಬವರ ಮನೆಯಂಗಳಕ್ಕೆ ಬಂದ ಹಾವನ್ನು; ಅವರ ಮನೆಯ ನಾಯಿ ಅಡ್ಡಗಟ್ಟಿಕೊಂಡು ಮುಂದೆ ತೆರಳದಂತೆ ತಡೆಹಿಡಿದಿತ್ತು. ಸುಮಾರು 3 ಗಂಟೆಗಳ ಕಾಲ ಹಾವನ್ನು ತೆರಳಲು ಬಿಡದ ನಾಯಿಯಿಂದಾಗಿ ಉರಗ ಪ್ರೇಮಿ ಬೋಸ್ ಮಾದಪ್ಪ ಹಿಡಿದು ಅರಣ್ಯ ಬಿಡುವಂತಾಯಿತು. ನಾಯಿ ಬೊಗಳುವ ಶಬ್ದಕ್ಕೆ ಮನೆಯಲ್ಲಿದ್ದವರು ನೋಡಿದಾಗ ಹಾವು ಪತ್ತೆಯಾಗಿದ್ದು, ಬೋಸ್ ಮಾದಪ್ಪ ಅವರಿಗೆ ಮಾಹಿತಿ ನೀಡಿದರು. ನಂತರ ಹಿಡಿದು ಅರಣ್ಯಕ್ಕೆ ಬಿಡಲಾಯಿತು. - ಸುದ್ದಿಪುತ್ರ