ಮಡಿಕೇರಿ, ಡಿ. 27: ಮೈಸೂರಿನ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ವಿರುದ್ಧ ಮಡಿಕೇರಿಯ ವಕೀಲರಾದ ಟಿ. ಕೃಷ್ಣಮೂರ್ತಿ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಭಗವಾನ್ ಅವರು “ರಾಮಮಂದಿರ ನಿರ್ಮಾಣ ಏಕೆ ಬೇಡ?” ಎಂದು ಬರೆದಿರುವ ಪುಸ್ತಕ ಇಂದು ಮೈಸೂರಿನಲ್ಲಿ ಬಿಡುಗಡೆಗೊಂಡಿದೆ. ಆ ಪುಸ್ತಕದಲ್ಲಿ ಹಿಂದೂಧರ್ಮದ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ ಹಾಗೂ ರಾಷ್ಟ್ರಪಿತ ಗಾಂಧೀಜಿ ಕುರಿತಾಗಿ ಅತ್ಯಂತ ಕೀಳು ಪದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸರು ಸೆ. 295 ರ ಅನ್ವಯ ದೂರು ದಾಖಲಿಸಿ ಕೊಂಡಿದ್ದಾರೆ. ಈ ಕುರಿತು ‘ಶಕ್ತಿ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಅವರ ಪ್ರತಿಕ್ರಿಯೆ ಬಯಸಿ ದಾಗ ದೂರು ದಾಖಲಾಗಿರುವದನ್ನು ಅವರು ಖಚಿತಪಡಿಸಿದರು. ಆದರೆ, ಮೈಸೂರಿನಲ್ಲಿ ಸಾಹಿತಿ ಹೇಳಿಕೆ ನೀಡಿರುವದರಿಂದ ಈ ದೂರನ್ನು ಪರಿವ್ಯಾಪ್ತಿಗೆ ಒಳಪಡುವ ಮೈಸೂರು ಪೊಲೀಸ್ ವಿಭಾಗಕ್ಕೆ ವರ್ಗಾಯಿಸ ಲಿರುವದಾಗಿ ಅವರು ತಿಳಿಸಿದರು. ವಕೀಲ ಕೃಷ್ಣಮೂರ್ತಿ ಅವರು ಸಲ್ಲ್ಲಿಸಿರುವ ದೂರಿನ ಸಾರಾಂಶ ಈ ಕೆಳಗಿನಂತಿದೆ.

(ಮೊದಲ ಪುಟದಿಂದ) ತಾ. 27 ರಂದು ರಾಜ್ಯದ ವಿವಿಧ ಕನ್ನಡ ಚಾನಲ್‍ಗಳಲ್ಲಿ ಭಗವಾನ್ ಬರೆದ ಪುಸ್ತಕದಲ್ಲಿ ಶ್ರೀ ರಾಮಚಂದ್ರ ದೇವರಲ್ಲ; ಕೊಲೆಗಾರ-ಶ್ರೀ ರಾಮ ಮತ್ತು ಸೀತೆ ಮದ್ಯಪಾನ ಮಾಡುತ್ತಿದ್ದರು-ರಾಷ್ಟ್ರಪಿತ ಗಾಂಧೀಜಿ ಒಬ್ಬ ಮತಾಂಧ ಹಾಗೂ ಸೀತಾಮಾತೆಯನ್ನು ಕ್ಯಾಬರೆ ನರ್ತಕಿಗೆ ಹೋಲಿಸಿರುವ ಕುರಿತು ಪ್ರಸಾರವಾಗುತ್ತಿದ್ದುದು ನನ್ನ ಗಮನಕ್ಕೆ ಬಂದಿತು. ಇದರಿಂದಾಗಿ ಹಿಂದೂ ಧರ್ಮೀಯನಾದ ನನ್ನ ಭಾವನೆಗಳಿಗೆ ಧಕ್ಕೆ ತಂದಿದೆ. ಇದಲ್ಲದೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಗಾಂಧೀಜಿಯವರ ಬಗ್ಗೆಯೂ ಅತ್ಯಂತ ಅವಹೇಳನಕಾರಿ ಪದಗಳನ್ನು ಉಪಯೋಗಿಸಿರುವದು ನನಗೆ ತಿಳಿದುಬಂದಿದೆ. ಕೆ.ಎಸ್. ಭಗವಾನ್ ಅವರು ಈ ಹಿಂದೆಯೂ ಇಂತಹ ಕೃತ್ಯವನ್ನು ಹಲವಾರು ಬಾರಿ ಮಾಡಿದ್ದಾರೆ. ಈಗ ಈ ಪುಸ್ತಕದಲ್ಲಿ ಬರೆದಿರುವ ಹಿನ್ನೆಲೆ ಕೂಡ ಉದ್ದೇಶ ಪೂರ್ವಕವಾಗಿದ್ದು, ಕೆಟ್ಟ ಭಾವನೆ, ಕೆಟ್ಟ ದೃಷ್ಟಿಯಿಂದಾಗಿದ್ದು ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡುವಂತದ್ದಾಗಿದೆ. ಈ ಹಿನ್ನೆಲೆಯಲ್ಲಿ ಭಗವಾನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಕೀಲರ ದೂರಿನಲ್ಲಿ ಮನವಿ ಮಾಡಲಾಗಿದೆ.