ಮಡಿಕೇರಿ, ಡಿ. 28: ನ್ಯೂಯಾರ್ಕ್‍ನ (ಯುಎನ್ ವಿಶ್ವಸಂಸ್ಥೆ) ಪ್ರಧಾನ ಕಚೇರಿಯಲ್ಲಿ 2019 ಮಾರ್ಚ್‍ನಲ್ಲಿ ನಡೆಯುವ ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್‍ನ ವಾರ್ಷಿಕ ‘ಚೇಂಜ್ ದಿ ವಲ್ರ್ಡ್-ಯುಎನ್ ಕಾನ್ಫರೆನ್ಸ್’ಗೆ ಮೈಸೂರಿನ ಪುಲಿಯಂಡ ಧೃತಿ ಬೋಪಣ್ಣ ವಿದ್ಯಾರ್ಥಿ ವೇತನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಧೃತಿ ಬೋಪಣ್ಣ ಫ್ರಾನ್ಸ್‍ನ ರೆನ್ನೆಸ್ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆಯಲ್ಲಿ ಎಂಎಸ್‍ಸಿ ಇನ್ ಗ್ಲೋಬಲ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ವಿಷಯ ಅಧ್ಯಯನ ಮಾಡುತ್ತಿದ್ದಾರೆ.

ಈಕೆ ಪುಲಿಯಂಡ ನಿತಿನ್ ಬೋಪಣ್ಣ ಮೈಸೂರಿನ ಡಿ ಪಾಲ್ ಪದವಿ ಕಾಲೇಜಿನ ಡೀನ್ ಆದ ಡಾ. ಸುಜಾತ ಬೋಪಣ್ಣ ದಂಪತಿಯ ಪುತ್ರಿ. ‘ಚೇಂಜ್ ದಿ ವಲ್ರ್ಡ್ ಮಾಡೆಲ್ ಯುನೈಟೆಡ್ ನೇಷನ್ಸ್’ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನವಾಗಿದ್ದು, ವಿಶ್ವದ ವಿವಿಧೆಡೆಯಿಂದ ಸುಮಾರು 2,500 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಅಂತರರಾಷ್ಟ್ರೀಯ ರಾಜಕೀಯ ಕಾರ್ಯ ಸೂಚಿಯ ಪ್ರಮುಖ ವಿಷಯಗಳನ್ನು ಚರ್ಚಿಸಲಿದ್ದಾರೆ.