ಸಿದ್ದಾಪುರ, ಡಿ.28: ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಗಳನ್ನು ಹೆಚ್ಚಿನ ಬಾಡಿಗೆಗೆ ನೀಡಿರುವ ಮಳಿಗೆಗಳ ಮಾಲೀಕರು ಗಳಿಗೆ ನೋಟಿಸ್ ಜಾರಿ ಮಾಡುವಂತೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಮಾತನಾಡಿ ಬಸ್ ನಿಲ್ದಾಣದಲ್ಲಿ ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳು ಇದ್ದು, ಮಳಿಗೆಗಳಿಂದ ಮಾಲೀಕರು ಕಡಿಮೆ ಬಾಡಿಗೆಯನ್ನು ಪಂಚಾಯಿತಿಗೆ ಪಾವತಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಂಚಾಯಿತಿಗೆ ಮಳಿಗೆ ಮಾಲೀಕರಿಂದ ಹೆಚ್ಚಿನ ಬಾಡಿಗೆಯನ್ನು ಪಡೆದು ಕೊಳ್ಳುವಂತೆ ಚರ್ಚಿ¸ Àಲಾಯಿತು. ಈ ಸಂದರ್ಭ ಕೆಲವು ಸದಸ್ಯರುಗಳು ಮಾತನಾಡಿ ಕೆಲವು ಮಾಲೀಕರು ಪಂಚಾಯಿತಿಯ ಮಳಿಗೆಗಳನ್ನು ಬೇರೆಯವರಿಗೆ ಹೆಚ್ಚಿನ ದರಕ್ಕೆ ಬಾಡಿಗೆಗೆ ನೀಡಿದ್ದು, ಅಂತಹ ಮಾಲೀಕರಿಗೆ ಪಂಚಾಯಿತಿ ವತಿಯಿಂದ ನೋಟಿಸ್ ಜಾರಿ ಮಾಡುವಂತೆ ಹೇಳಿದರು.
ಸಿದ್ದಾಪುರದ ಪಟ್ಟಣದ ಕೆಲವು ಕೋಳಿ ಮಾಂಸದ ವ್ಯಾಪಾರಿಗಳು ಸ್ಥಳೀಯ ಮೈಸೂರು ರಸ್ತೆಯ ಚರಂಡಿಯ ಮೂಲಕ ಕೋಳಿ ತ್ಯಾಜ್ಯಗಳನ್ನು ಕಾಫಿ ತೋಟಗಳಿಗೆ ಹರಿಯ ಬಿಡುತ್ತಿದ್ದು, ಇದರಿಂದಾಗಿ ಅಶುಚಿತ್ವ ಹೆಚ್ಚಾಗಿ ಸುತ್ತಲಿನ ಪರಿಸರ ಹದಗೆಡುತ್ತಿದೆ ಎಂದು ಹಾಗೂ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ ಎಂದು ಆ ಭಾಗದ ಸದಸ್ಯರುಗಳು ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಣಿ ವಹಿಸಿದ್ದರು.