ಸೋಮವಾರಪೇಟೆ, ಡಿ. 28: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆಗಳು ಹಾಗೂ ಹೊಟೇಲ್‍ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ದುದ್ದುಗಲ್ಲು ಹೊಳೆಗೆ ಕಾಫಿ ಪಲ್ಪಿಂಗ್ ನೀರು ಹರಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವದಾಗಿ ಪ.ಪಂ. ಮುಖ್ಯಾಧಿಕಾರಿ ನಟರಾಜ್ ಎಚ್ಚರಿಸಿದ್ದಾರೆ.
ಪಟ್ಟಣಕ್ಕೆ ನೀರು ಸರಬರಾಜಾಗುವ ದುದ್ದುಗಲ್ಲು ಹೊಳೆ ಹಾಗೂ ಪಂಪ್‍ಹೌಸ್‍ಗಳಿಗೆ ಅಭಿಯಂತರ ವೀರೇಂದ್ರ ಹಾಗೂ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಾಧಿಕಾರಿಗಳು, ಹೊಳೆಗೆ ಕಾಫಿ ಪಲ್ಪಿಂಗ್ ನೀರು ಹರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಪಲ್ಪರ್ ಹೌಸ್‍ಗಳ ಮಾಲೀಕರು ಈ ಬಗ್ಗೆ ತಕ್ಷಣ ಗಮನಹರಿಸಿ, ತ್ಯಾಜ್ಯ ನೀರು ಹರಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ಪಲ್ಪಿಂಗ್ ತ್ಯಾಜ್ಯ ನೀರು ಜಲಮೂಲಕ್ಕೆ ಸೇರಿದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವದರಿಂದ ಸಂಬಂಧಿಸಿದ ತೋಟದ ಮಾಲೀಕರು, ದುದ್ದುಗಲ್ಲು ಹೊಳೆಯ ಪಕ್ಕದಲ್ಲಿರುವ ಕಾಫಿ ಪಲ್ಪಿಂಗ್ ಘಟಕಗಳ ತ್ಯಾಜ್ಯ ನೀರನ್ನು ಹೊಳೆಗೆ ಹರಿಯಲು ಬಿಡದೇ ಕೂಡಲೇ ಸ್ಥಗಿತಗೊಳಿಸಬೇಕು. ತಪ್ಪಿದ್ದಲ್ಲಿ ಅಂತಹವರ ವಿರುದ್ದ ಕರ್ನಾಟಕ ಪುರಸಭಾ ಕಾಯ್ದೆ 1964 ಸೆಕ್ಷನ್ 234 ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಮುಖ್ಯಾಧಿಕಾರಿ ನಟರಾಜ್ ಎಚ್ಚರಿಕೆ ನೀಡಿದ್ದಾರೆ.