ನಾಪೋಕ್ಲು, ಡಿ. 28: ಆ ದಂಪತಿ, ಕೂಲಿ ಮಾಡಿಕೊಂಡೇ ಇಬ್ಬರು ಮಕ್ಕಳನ್ನು ಬೆಳೆಸಿದರು. ಮಕ್ಕಳಿಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಮಕ್ಕಳು ಹತ್ತಿರವಿಲ್ಲ ಎಂಬ ಕೊರಗು ಈ ದಂಪತಿಯರಲ್ಲಿ ಕಾಡುತ್ತಿಲ್ಲ. ಕಾರಣ, ಮನೆಯಲ್ಲಿ ಇನ್ನೊಬ್ಬ ಸದಸ್ಯನಿದ್ದಾನೆ. ಮಕ್ಕಳಿಗಿಂತ ಹೆಚ್ಚಿನ ಅನುರಾಗದಿಂದ ಈತನನ್ನು ದಂಪತಿ ಪಾಲನೆ ಮಾಡುತ್ತಿದ್ದಾರೆ. ಒಂದು ವಿಶೇಷವೆಂದರೆ, 8 ವರ್ಷ ಪ್ರಾಯದ ಈ ಮಗನಿಗೆ ನೈಟ್‍ಡ್ಯೂಟಿ. ರಜೆಯೂ ಇಲ್ಲ. ದಿನಂಪ್ರತಿ ಸಂಜೆ ಉಂಡು, ಮನೆಬಿಟ್ಟರೆ ಆತ ಮನೆ ಸೇರುವದು ಮರುದಿನ ನಸುಕಿನ 5 ಗಂಟೆಗೆ. ಅನಾಥ ಮಕ್ಕಳಿಗೆ, ದಿಕ್ಕಿಲ್ಲದ ಬೆಕ್ಕುಗಳಿಗೆ ಜೀವನ ಕೊಟ್ಟವರು ಈ ದಂಪತಿ. ಮಾನವೀಯ ಅಂತ:ಕರಣದ ಈ ಅಪರೂಪದ ದಂಪತಿ ಇರುವದು ನಾಪೋಕ್ಲಿನ ಕಲ್ಲುಮೊಟ್ಟೆಯಲ್ಲಿ.

ಬೆಳ್ಯಪ್ಪ ಮತ್ತು ಸೀತಮ್ಮ ದಂಪತಿಯೊಂದಿಗೆ ಒಬ್ಬ ವಿಶೇಷ ವ್ಯಕ್ತಿ, ಈ ಕುಟುಂಬದ ಸದಸ್ಯನಾಗಿದ್ದಾನೆ. ಆತನೇ ಗೂಬಣ್ಣ. ತೋಟವೊಂದರಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ಗೂಬೆ ಮರಿಯನ್ನು ಮನೆಗೆ ತಂದು ಸಾಕಿದ್ದರು. ಈ ಗೂಬೆಗೆ, ಕಳೆದ ನವೆಂಬರ್ 27ಕ್ಕೆ 8 ವರ್ಷ ತುಂಬಿದೆ. ಗೂಬಣ್ಣ, ತನ್ನ ಎರಡು ಕಣ್ಣುಗಳನ್ನು ಅಗಲಿಸಿ, ಮನೆಯವರಿಂದ ಆಹಾರ ಕೇಳುತ್ತಾನೆ. ಅವರೊಂದಿಗೆ ಚಿನ್ನಾಟವಾಡುತ್ತಾ ಕಾಲ ಕಳೆಯುತ್ತಿದ್ದಾನೆ. ಗೂಬಣ್ಣನಿಗೆ ಕೋಳಿ ಮಾಂಸವೆಂದರೆ ಪಂಚಪ್ರಾಣ. ಈತ ಸಂಜೆ 5 ಗಂಟೆಯಾಯ್ತೆಂದರೆ ಬೇಟೆಗೆ ಹೊರಡುತ್ತಾನೆ. ಮತ್ತೆ ಮನೆಗೆ ಮರಳುವದು ನಸುಕಿನ 5 ಗಂಟೆಗೆ. ಹಗಲಿಡೀ ಕೊಟ್ಟಿಗೆಯಲ್ಲಿ ವಿಶ್ರಾಂತಿ ಪಡೆಯುವ ಈ ನಿಶಾಚರಿ, ಮನಸ್ಸಾದರೆ ಮನೆಯವರೊಂದಿಗೆ ಚಿನ್ನಾಟವಾಡುತ್ತಾ ಕಾಲ ಕಳೆಯುತ್ತಾನೆ.

ಪರಿಶುದ್ಧ ಪ್ರೀತಿಗೆ ಯಾವ ಜೀವಿ ತಾನೇ ಸೋಲದಿರದು? ಬೆಳ್ಯಪ್ಪ ಅವರ ಮನದಾಳದ ಪ್ರೀತಿಯ ಕರೆಗೆ, ಗೂಬಣ್ಣ ಎಲ್ಲಿದ್ದರೂ ಹಾರಿ ಬರುತ್ತಾನೆ. ಕೆಲವೊಮ್ಮೆ, ಮನೆಯನ್ನೇ ಮರೆಯುವದೂ ಇದೆ. ಕಳೆದ ಹುತ್ತರಿಯಂದು ಪಟಾಕಿ ಶಬ್ದಕ್ಕೆ ಬೆಚ್ಚಿ ಹೋಗಿದ್ದ ಗೂಬಣ್ಣ, 2 ವಾರಗಳ ಬಳಿಕ ಮರಳಿ ಬಂದಿದ್ದ...

ಅಪರೂಪದ ವ್ಯಕ್ತಿತ್ವ ಹೊಂದಿರುವ ಬೆಳ್ಯಪ್ಪ ಮತ್ತು ಸೀತಮ್ಮ, ದಿಕ್ಕಿಲ್ಲದ ಸುಮಾರು 25ಕ್ಕೂ ಅಧಿಕ ಬೆಕ್ಕಿನ ಮರಿಗಳನ್ನು ಪೋಷಿಸುತ್ತಿದ್ದಾರೆ. 25 ವರ್ಷಗಳ ಹಿಂದೆ ಸುಮಾರು ಏಳು ಅನಾಥ ಮಕ್ಕಳಿಗೆ ಆಸರೆಯಾಗಿ ನಿಂತವರು ಈ ದಂಪತಿ. ಸಮಾಜದಲ್ಲಿ ಅತಂತ್ರವಾದ ಮಕ್ಕಳನ್ನು ತಾವೇ ಸಲಹಿ, ಅವರಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಈ ಪೈಕಿ ಇಬ್ಬರನ್ನುಳಿದು ಎಲ್ಲರಿಗೂ ಮದುವೆಯಾಗಿದೆ. ಇಬ್ಬರು ವ್ಯಾಸಂಗ ಮಾಡುತ್ತಿದ್ದಾರೆ. ಬೆಳ್ಯಪ್ಪ ಅವರ ಸ್ವಂತ ಮಕ್ಕಳಿಬ್ಬರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಹಗಲಿಡೀ ತೋಟಗಳಲ್ಲಿ ಬೆವರು ಹರಿಸಿ, ತಂದ ಕೂಲಿಯಿಂದಲೇ ಅಷ್ಟೂ ಮಕ್ಕಳಿಗೆ ಬದುಕು ರೂಪಿಸಿಕೊಟ್ಟವರು ಬೆಳ್ಯಪ್ಪ ದಂಪತಿ. ಹೀಗಿದ್ದರೂ ಒಂದೇ ಒಂದು ದಿನವೂ ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸಿಲ್ಲ ಎಂದು ಬೆಳ್ಯಪ್ಪ ಧನ್ಯತಾಭಾವದಿಂದ ಹೇಳುತ್ತಾರೆ.

ಬೆಳ್ಯಪ್ಪ ಅವರ ಕಾರ್ಯವ್ಯಾಪ್ತಿ ಇಷ್ಟಕ್ಕೆ ಸೀಮಿತವಾಗಿಲ್ಲ. ಬಿಡುವಿನ ಸಮಯದಲ್ಲಿ ಜ್ಯೋತಿಷ್ಯ ಹೇಳುವ ಇವರು, ಅನೇಕ ಕಾಯಿಲೆಗಳಿಗೆ ಮನೆ ಮದ್ದು ಮಾಡುತ್ತಾರೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಹುಳುಕು ಮತ್ತು ಮಕ್ಕಳ ಕಾಯಿಲೆಗಳಿಗೆ ಆಯುರ್ವೇದಿಕ್ ಔಷಧಿ ತಯಾರಿಸಿ ನೀಡುತ್ತಾರೆ. ಬೆಳ್ಯಪ್ಪ ದಂಪತಿಯಲ್ಲಿರುವ ಈ ಮಾನವೀಯ ಅಂತ:ಕರಣ ನಿಜಕ್ಕೂ ಮಾದರಿಯಾದುದ್ದು.

- ದುಗ್ಗಳ ಸದಾನಂದ, ನಾಪೋಕ್ಲು