ಗೋಣಿಕೊಪ್ಪಲು, ಡಿ. 28: ಆರ್ಥಿಕ, ಸಾಮಾಜಿಕ, ಕ್ರೀಡೆ, ಸಾಹಿತ್ಯ, ಸಾಂಸ್ಕøತಿಕ, ಧಾರ್ಮಿಕ, ರಾಜಕೀಯ, ಸಹಕಾರ, ಶಿಸ್ತು ಪಾಲನೆ, ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ದೇಶ ರಕ್ಷಣೆಯಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ರಾಷ್ಟ್ರಕ್ಕೆ ನೀಡಿರುವ ಕೊಡಗು ಭಾರತ ದೇಶದ ಭಾಗ್ಯದ ನೆಲ ಎಂದು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ವಾಗ್ಮಿ ಬಾಚರಣಿಯಂಡ ಅಪ್ಪಣ್ಣ ಹೇಳಿದರು.

ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‍ಎಸ್‍ಎಸ್ ಘಟಕದ ವತಿಯಿಂದ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು. ಗಾಂಧೀಜಿಯ 18 ರಚನಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ಕೀರ್ತಿ ಕೊಡಗಿಗೆ ಸಲ್ಲುತ್ತದೆ. ಕೊಡಗು ಪುಟ್ಟ ಜಿಲ್ಲೆಯಾದರೂ ಎಲ್ಲಾ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿ ದೇಶಕ್ಕೇ ಆದರ್ಶ ಕೊಟ್ಟ ಜಿಲ್ಲೆ, ಈ ಕಾರಣಕ್ಕಾಗಿಯೇ ಸರ್ದಾರ್ ವಲ್ಲಭಬಾಯಿ ಪಟೇಲರು ಕೊಡಗನ್ನು ಭಾರತ ದೇಶದ ಆದರ್ಶ ರಾಜ್ಯವೆಂದು ಕರೆದಿದ್ದರು ಎಂದು ಹೇಳಿದರು.

ಬೇಗೂರು ಗ್ರಾಮಸ್ಥ ಚೋಡುಮಾಡ ಶ್ಯಾಮ್ ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುದಿಕೇರಿ ಗ್ರಾಂ.ಪಂ. ಸದಸ್ಯೆ ಮಂಡೇಪಂಡ ಹರಿಣಿ ತಿಲಕ್, ನಿವೃತ್ತ ಪಿಡಿಓ ಚೇಂದಿರ ಲೋಕನಾಥ್, ವಿಎಸ್‍ಎಸ್‍ಎನ್ ಸದಸ್ಯರಾದ ಚೇಂದಿರ ರಘು ತಿಮ್ಮಯ್ಯ, ಕೇಚೆಟ್ಟಿರ ಪ್ರಭು, ಮತ್ರಂಡ ನವೀನ್, ಚೋಡುಮಾಡ ವಾಸು ಕುಶಾಲಪ್ಪ ಎನ್‍ಎಸ್‍ಎಸ್ ಅಧಿಕಾರಿಗಳಾದ ಎಂ.ಎನ್. ವನಿತ್‍ಕುಮಾರ್ ಹಾಗೂ ಎನ್.ಪಿ. ರೀತ ಹಾಜರಿದ್ದರು.

ಗ್ರಾಮೀಣ ಕ್ರೀಡೆ

ಕ್ರಿಕೆಟ್‍ನ ಭರಾಟೆಯಲ್ಲಿ ಮರೆತು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ನೆನಪಿಸುವ ಸಲುವಾಗಿ ಗ್ರಾಮಸ್ಥರಿಗಾಗಿ ಸಂಜೆ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಕುಂಟು ಬಿಲ್ಲೆ, ಹಗ್ಗ ಜಗ್ಗಾಟ, ಬಸ್ಸಿನ ಹುಡುಕಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ಗೋಣಿಚೀಲ ಓಟ ಹಾಗೂ ವಾಲಿಬಾಲ್ ಕ್ರೀಡೆಗಳನ್ನು ನಡೆಸಲಾಯಿತು. ಗ್ರಾಮೀಣ ಕ್ರೀಡಾಕೂಟವನ್ನು ಕಾವೇರಿ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಕೋದಂಡ ಬಿ. ದೇವಯ್ಯ ಉದ್ಘಾಟಿಸಿದರು. ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಖುಷಿ ಪಟ್ಟರು. ಬೇಗೂರು ಶಾಲಾ ಶಿಕ್ಷಕಿಯರು ಹಾಗೂ ಬೇಗೂರಿನ ಮಹಿಳೆಯರು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಮೆರುಗು ತಂದರು. ಮಹಿಳಾ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಮಹಿಳಾ ಸಬಲೀಕರಣದ ಬಗ್ಗೆ ಕಿರು ನಾಟಕ ಪ್ರದರ್ಶನ ಮಾಡಿದರು. ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿಯ ಸದಸ್ಯರಿಂದ ಹಾಸ್ಯ ನಾಟಕ ಹಾಗೂ ವೈವಿಧ್ಯಮಯ ಜಾನಪದ ಗೀತೆಗಳು ಮೂಡಿಬಂದವು.