ಗೋಣಿಕೊಪ್ಪ ವರದಿ, ಡಿ. 28: ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ರೈತ ನೋಂದಣಿ ದಾಖಲಾತಿಗೆ ಮುಂದಾಗಿರು ವದರಿಂದ ಭತ್ತ ಕೃಷಿ ಮತ್ತಷ್ಟು ಕಂಟಕವಾಗಲಿದೆ ಎಂದು ಸರ್ಕಾರದ ನಿಯಮದ ಬಗ್ಗೆ ಹಿರಿಯ ಪ್ರಗತಿಪರ ಬೆಳೆಗಾರ ಬೋಸ್ ಮಂದಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅತ್ತೂರು ತರಕಾರಿ ಸಸ್ಯ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಅರ್ಕಾ ನಿಖಿತ ಬೆಂಡೆಕಾಯಿ ಬೆಳೆಗಳ ಕ್ಷೇತ್ರೋತ್ಸವದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಮೂಲಕ ಮಾರಾಟ ಮಾಡಲು ಜಿಲ್ಲಾಧಿಕಾರಿ ಕಚೇರಿಯ ಕೋಣೆ ಸಂಖ್ಯೆ 23 ಕ್ಕೆ ತೆರಳಿ ನೋಂದಣಿ ಮಾಡಿಸಲು ತಾನು ತೆರಳಿದ್ದೆ. ಅವರದ್ದೇ ಹೆಸರಿನಲ್ಲಿರುವ ಭೂಮಿ, ಭೂಮಿಯ ಹಕ್ಕುದಾರರೇ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ನಿಯಮವಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ರೈತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನೋಂದಣಿ ಮಾಡಿ ಮಾರಾಟ ಮಾಡುವದು ದೊಡ್ಡ ಸಮಸ್ಯೆಯಾಗಿದೆ. ಬೆಳೆಯ ತೇವಾಂಶ ಪತ್ತೆ ಹಚ್ಚಿಕೊಂಡು ನಂತರ ಅಲ್ಲಿ ಖರೀದಿಸಲಾಗುತ್ತದೆ. ಸರ್ಕಾರದ ನಿಯಮದಂತೆ ನಾವು ಬೆಳೆದ ಭತ್ತ ಇಲ್ಲ ಎಂದು ಕಡೆಗಣಿಸಿದಾಗ ಮತ್ತೆ ವಾಹನ ಖರ್ಚು ಮಾಡಿಕೊಂಡು ಮನೆಗೆ ತೆರಳಬೇಕಾಗಿದೆ. ಇಂತಹ ವ್ಯವಸ್ಥೆ ಭತ್ತ ಕೃಷಿಗೆ ಕಂಟಕವಾಗಲಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆಗಾರ ಎಂಬ ಪ್ರಮಾಣ ಪತ್ರವನ್ನು ಆಧಾರವಾಗಿಟ್ಟು ಕೊಂಡು ಖರೀದಿ ಮಾಡಲಿ ಎಂದು ಒತ್ತಾಯಿಸಿದರು. ಇಂತಹ ನಿಯಮ ದಿಂದ ಭತ್ತ ಕೃಷಿಗೆ ಮತ್ತಷ್ಟು ಕಂಟಕವಾಗಲಿದೆ ಎಂದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಕೃಷಿ ಇಲಾಖೆ ಆತ್ಮ ಯೋಜನೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅರ್ಕಾ ನಿಖಿತ ಬೆಂಡೆಕಾಯಿ ಕ್ಷೇತ್ರೋತ್ಸವ ಕಾರ್ಯ ಕ್ರಮದಲ್ಲಿ ಭಾರತೀಯ ಸಂಶೋಧನಾ ಕೇಂದ್ರದ ವಿಜ್ಞಾನಿ ಪಿಚಾಯಿಮುತ್ತು ನಿಕಿತಾ ತಳಿಯ ಬಗ್ಗೆ ಮಾಹಿತಿ ನೀಡಿದರು.

ಹಳದಿ ನಂಜುರೋಗ ನಿರೋಧಕ ಶಕ್ತಿ ಹೊಂದಿರುವ ಅರ್ಕಾ ನಿಖಿತ ಎಂಬ ಬೆಂಡೆಕಾಯಿ ತಳಿ ಬೆಳೆಯು ವದರಿಂದ ಹೆಚ್ಚು ಲಾಭಕರವಾಗಿದೆ. ಬೆಂಡೆ ಕಾಯಿಗೆ ಹಳದಿ ನಂಜುರೋಗ ಬಾಧೆಯಿಂದ ನಷ್ಟ ಹೆಚ್ಚಾಗುತ್ತಿತ್ತು. ಅರ್ಕಾ ಅನಾಮಿಕ, ಅರ್ಕಾ ಅಭಯ್ ತಳಿಗಳು ಸಂಶೋಧನೆಗೊಂಡು ಬಹು ವರ್ಷಗಳ ನಂತರ ರೋಗಕ್ಕೆ ತುತ್ತಾಗುತ್ತಿತ್ತು. ನಷ್ಟದ ಹಾದಿಯನ್ನು ತಪ್ಪಿಸಲು ಭಾರತೀಯ ಸಂಶೋಧನಾ ಕೇಂದ್ರದ ವತಿಯಿಂದ ಹೊಸ ತಳಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ತಳಿ ಹಳದಿ ನಂಜುರೋಗದಿಂದ ಮುಕ್ತವಾಗಿದ್ದು, ರೈತರಿಗೆ ಈ ತಳಿಯನ್ನು ಶಿಪಾರಸ್ಸು ಮಾಡಲಾಗುತ್ತಿದೆ ಎಂದರು.

ಹೆಚ್ಚು ಹೆಣ್ಣು ಹೂಗಳು ಈ ತಳಿಗಳಲ್ಲಿ ಕಾಣ ಸಿಗುವದರಿಂದ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿ ಯಾಗಲಿದೆ. ಪ್ರತೀ ಏಕರೆಗೆ ರೂ. 40 ಸಾವಿರದಷ್ಟು ಲಾಭ ಪಡೆಯಲು ಸಾಧ್ಯವಿದೆ. ಕೃಷಿಕರು ತರಕಾರಿ ಬೆಳೆಗಳಲ್ಲಿ ಈ ತಳಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಅತ್ತೂರು ತರಕಾರಿ ಸಸ್ಯ ಕ್ಷೇತ್ರದ ಅಧಿಕಾರಿ ಡಾ. ದೇವಯ್ಯ ಮಾತನಾಡಿ, ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಂಡೆ ಕಾಯಿ ಕೃಷಿಗೆ ಹಿನ್ನಡೆಯಾಗುತ್ತದೆ. ಆದರೆ, ಪ್ರಯೋಗದ ಮೂಲಕ ಬೆಳೆದ ಅರ್ಕಾ ನಿಖಿತ ಬೆಂಡೆಕಾಯಿ ತಳಿಯ ಬೆಳೆ ಗುಣಮಟ್ಟದಿಂದ ಬಂದಿದೆ. ನಿರೀಕ್ಷೆಗಿಂತ ಹೆಚ್ಚು ಲಾಭಕರವಾಗಿದೆ. ಇಳುವರಿ ಕೂಡ ಹೆಚ್ಚಿದೆ. ಕೊಡಗಿನ ಹವಾಗುಣದಲ್ಲಿ ಏಕರೆಗೆ 10 ಟನ್ ಬೆಳೆ ಉತ್ಪಾದನೆ ಸಾಧ್ಯವಿದೆ. ಕನಿಷ್ಟವಾಗಿ ರೂ. 1 ಲಕ್ಷ ಮೌಲ್ಯದ ವಾರ್ಷಿಕ ಬೆಳೆ ಉತ್ಪಾದಿಸಬಹುದಾಗಿದೆ ಎಂದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ರೋಗ ನಿರೋಧಕ ಶಕ್ತಿ ಹೊಂದಿರುವ ನಿಖಿತಾ ತಳಿಯ ಬೆಂಡೆಕಾಯಿ ಬೆಳೆಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿದೆ. ನಮ್ಮ ಕ್ಷೇತ್ರದಲ್ಲಿ ಉತ್ತಮವಾಗಿ ಬೆಳೆದಿರುವದರಿಂದ ಕೊಡಗಿನ ಹವಾಗುಣಕ್ಕೆ ಪೂರಕ ತಳಿಯಾಗಿದೆ ಎಂದರು. ಡಾ. ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಡಾ. ವೀರೇಂದ್ರಕುಮಾರ್, ಮಡಿಕೇರಿ, ಸೋಮವಾರಪೇಟೆ, ಮಾದಾಪುರ, ದಕ್ಷಿಣ ಕೊಡಗಿನ ತರಕಾರಿ ಬೆಳೆಗಾರರು ಪಾಲ್ಗೊಂಡಿದ್ದರು.

- ಸುದ್ದಿಪುತ್ರ