ಗೋಣಿಕೊಪ್ಪ ವರದಿ, ಡಿ. 28: ರಾಷ್ಟ್ರೀಯ ಸೇವಾ ಯೋಜನೆ ಸೇವಕರು ಗ್ರಾಮೀಣ ಜನರಲ್ಲಿ ನೆಲೆನಿಂತಿರುವ ಮೂಢನಂಬಿಕೆ ಹೋಗಲಾಡಿಸಿ, ಅನಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಿ ಅವುಗಳನ್ನು ತೊಡೆದು ಹಾಕಲು ಪ್ರಯತ್ನಿಸಬೇಕು ಎಂದು ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಟಿ. ಬೋಪಯ್ಯ ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ವಾರ್ಷಿಕ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಭಾರತ ಸಂಪದ್ಭರಿತ ದೇಶವಾಗಿದ್ದು ಮುಂದುವರೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಗ್ರಾಮೀಣ ಜನರಲ್ಲಿ ನೆಲೆನಿಂತಿರುವ ಮೂಢನಂಬಿಕೆ, ಅನಕ್ಷರತೆಯಿಂದ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವುಗಳನ್ನು ತೊಡೆದು ಹಾಕಲು ಪ್ರಯತ್ನಿಸಬೇಕು ಎಂದರು.

ಈ ಸಂದರ್ಭ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಬೆಂಜಂಡ ಪಾರ್ವತಿ, ಗ್ರಾಮದ ಪ್ರಮುಖರುಗಳಾದ ಚೋಡುಮಾಡ ರವಿ ಚೋಮುಣಿ, ಕೇಚೆಟ್ಟಿರ ಡಿ. ನಂಜಪ್ಪ, ಆಲಿರ ಸಾದಲಿ, ಕೋಳೆರ ಸೋಮಯ್ಯ, ಮಲ್ಚೀರ ಎನ್. ಸೋಮಯ್ಯ, ಎಸ್‍ಎಸ್ ಯೋಜನಾಧಿಕಾರಿಗಳಾದ ಎಂ.ಎನ್. ವನಿತ್‍ಕುಮಾರ್ ಹಾಗೂ ಎನ್.ಪಿ. ರೀತಾ ಉಪಸ್ಥಿತರಿದ್ದರು.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ವಿದ್ಯಾಶ್ರೀ ಅಶೋಕ್ ಭಟ್ ನೇತೃತ್ವದ ನಾಟ್ಯ ಸಂಕಲ್ಪ ನೃತ್ಯ ತಂಡದ ಮಕ್ಕಳಿಂದ ಮಹಿಷó ಮರ್ಧಿನಿ, ದಶಾವತಾರ ನೃತ್ಯರೂಪಕ, ಭರತನಾಟ್ಯ, ಜನಪದ ನೃತ್ಯ ಮೂಡಿ ಬಂದವು. ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.