ಮಡಿಕೇರಿ, ಡಿ. 26 : ನಮ್ಮದು ಎಂದುಕೊಂಡಿದ್ದ ಮನೆ, ತೋಟ, ಸಮಸ್ತ ಆಸ್ತಿ ಎಲ್ಲವೂ ಪ್ರಾಕೃತಿಕ ದುರಂತದಲ್ಲಿ ಕೊಚ್ಚಿಕೊಂಡು ಹೋಗಿದೆ. ತುಂಬಾ ಓದಿ ಏನಾದರೂ ಸಾಧಿಸಬೇಕೆಂಬ ಆಸೆ ದಿಕ್ಕೆಟ್ಟಂತಾಗಿದೆ ಎಂಬ ಮಾತುಗಳು ಕೊಡಗಿನ ಸಂತ್ರಸ್ತ ವಿದ್ಯಾರ್ಥಿನಿಯರ ಮನದಾಳದಿಂದ ಹೊರಬಂದವು.

ಕೊಡಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪೀಪಲ್ ಫಾರ್ ಪೀಪಲ್ ಸಂಸ್ಥೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ‘ಸಾವಿತ್ರಿ ಬಾ ಪುಲೆ’ ಚಲನಚಿತ್ರ ಪ್ರದರ್ಶನ ಏರ್ಪಡಿಸಿತ್ತು. ಕಾರ್ಯ ಕ್ರಮದ ಪೂರ್ವಭಾವಿ ಸಭೆಯಲ್ಲಿ ಪೀಪಲ್ ಫಾರ್ ಪೀಪಲ್ ಹಾಗೂ ನಮ್ಮ ಕೊಡಗು ಬಳಗದ ಮೂಲಕ ಕೊಡಗಿನ ಸಂತ್ರಸ್ತ ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ತೆರಳಿದ್ದ ಮಕ್ಕಂದೂರು ಹೆಮ್ಮೆತ್ತಾಳು ಗ್ರಾಮದ ಕೆ.ಎಸ್. ಸುರಕ್ಷಾ, ಜೋಡುಪಾಲದ ಎನ್.ಕೆ. ಪೂರ್ಣಿಮಾ ಅವರುಗಳು ತಮ್ಮ ನೋವನ್ನು ತೋಡಿಕೊಂಡರು. ಭಾಗವಹಿಸಿದ್ದ ವಸತಿಶಾಲೆಗಳ ಕಾರ್ಯನಿರ್ವಾಹಕ ಅಧ್ಯಕ್ಷ ನಂದನ್ ಕುಮಾರ್ ಅವರು ಸಂತ್ರಸ್ತ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುವದಾಗಿ ಆಶ್ವಾಸನೆ ನೀಡಿದರು.

ಚಿತ್ರನಟಿ ತಾರಾ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಧೀಮಂತ ಮಹಿಳೆ ಸಾವಿತ್ರಿ ಬಾ ಪುಲೆಯ ಕುರಿತಾದ ಈ ಚಲನಚಿತ್ರ ಪ್ರದರ್ಶನ ಕೊಡಗಿನ ಮಕ್ಕಳಿಗಾಗಿ ನಡೆಸುತ್ತಿರುವದು ಹೆಚ್ಚು ಅರ್ಥಪೂರ್ಣ. ಸಾವಿತ್ರಿ ಬಾ ಪುಲೆಯವರಿಗೆ ಸಲ್ಲಿಸುವ ಗೌರವ. ಕೊಡಗಿನ ಮಕ್ಕಳಿಗಾಗಿ ‘ಹೆಬ್ಬೆಟ್ಟು ರಾಮಕ್ಕ’ ಚಲನಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗುವದು ಎಂಬ ಭರವಸೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಕೊಡಗಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ತುರ್ತಾಗಿ ಮುಖ್ಯಮಂತ್ರಿಯವರೊಂದಿಗೆ ಸಭೆ ನಡೆಸಿ ವಾಸ್ತವ ಚಿತ್ರಣ ಕಟ್ಟಿಕೊಟ್ಟು ಸರ್ಕಾರದಿಂದ ಹೆಚ್ಚಿನ ಸಹಾಯದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುವದಾಗಿ ಹೇಳಿದರು.

ಶಾಸಕ ಅರುಣ್ ಶಹಾಪುರ ಅವರು ಅಧಿವೇಶನದಲ್ಲೂ ಕೊಡಗಿನ ಸಮಸ್ಯೆಯ ಗಂಭೀರತೆ ಗಮನಕ್ಕೆ ಬಂದಿರಲಿಲ್ಲ. ಆದರೆ ಈಗ ಮಕ್ಕಳ ನೋವಿನ ಮಾತನಿಂದ ಅರ್ಥವಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರದಿಂದ ಹೆಚ್ಚಿನ ಸಹಾಯ ದೊರಕಿಸಿಕೊಡುವದಾಗಿ ಹೇಳಿದರು. ಪೀಪಲ್ ಫಾರ್ ಪೀಪಲ್ ಸಂಸ್ಥೆ ನಡೆಸಿದ ಈ ಚಲನಚಿತ್ರ ಪ್ರದರ್ಶನದ ತಕ್ಷಣದ ಫಲಶೃತಿ ಎಂಬಂತೆ ನಟ ಪ್ರಕಾಶ್ ರಾಜ್ ಅವರು ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ 4.89ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು 5 ಮಂದಿ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ; ಸದ್ಯದಲ್ಲೇ ಕೊಡಗಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ನೆರವು ಹಸ್ತಾಂತರಿಸಲಾಗವದೆಂದು ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಅಧ್ಯಕ್ಷ ಚಕ್ರವರ್ತಿ ಚಂದ್ರಚೂಡ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡಗಿನಿಂದ ಮದೆನಾಡಿನ ಕೆ.ಡಿ. ಪೂರ್ಣಿಮಾ, ಕಾಂಡನಕೊಲ್ಲಿಯ ಮೋಕ್ಷಿತ, ಡಯಾನ, ಕಾಟಕೇರಿಯ ಹೀತಲ್, ನಮ್ಮ ಕೊಡಗು ಬಳಗದ ಅಧ್ಯಕ್ಷ ಕೊಪ್ಪದ ನೌಷದ್, ಖಜಾಂಚಿ ಕುಶಾಲನಗರದ ಲೋಹಿತ್, ಸದಸ್ಯೆ 7ನೇ ಹೊಸಕೋಟೆಯ ನೇತ್ರಾ ಪಾಲ್ಗೊಂಡಿದ್ದರು.

ಅಂತರ್ರಾಷ್ಟ್ರೀಯ ಕಲಾವಿದ ಎಂ. ಎಸ್. ಮೂರ್ತಿ, ಮಾವಳ್ಳಿ ಶಂಕರ್, ಬಿ. ಗೋಪಾಲ್, ಡಾ. ರಾಜಪ್ಪ ದಳವಾಯಿ, ಡಾ. ಕೆ ಸಿ ಶಿವಾರೆಡ್ಡಿ, ಡಾ. ಟಿ ಗೋವಿಂದರಾಜು, ರಂಗಕರ್ಮಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ, ಸೂರ್ಯ ಮುಕುಂದರಾಜ್, ಕನ್ನಡಪರ ಸಂಘಟನೆಗಳ ನಾಗೇಶ್, ಗುರುದೇವ್, ನಾರಾಯಣ್, ಪ್ರಕಾಶ್, ಮೂರ್ತಿ, ಹಿರಿಯ ಕಲಾವಿದ ದೊಡ್ಡಣ್ಣ, ಅಹಮದ್, ಸುರೇಶ್ , ಸುಚೇಂದ್ರ ಪ್ರಸಾದ್, ವಿಶಾಲ್, ನಂಜುಂಡೇಗೌಡ ಜಿ. ಎನ್. ನಾಗರಾಜ್, ಶಿವಬಸವ ಸ್ವಾಮೀಜಿ, ಪಂಚಮಿ, ಚೈತ್ರಾ ಕೋಟೂರ್ ಮನ್ಸೋರೆ, ಹೇಮಾವಂಕಟ್, ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.ಅಕ್ಷರದವ್ವ ಸಾವಿತ್ರಿಬಾಪುಲೆ ಸಿನಿಮಾ ನೋಡಲು ಅಂಬೇಡ್ಕರ್ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು, ನಟ ನಟಿಯರು ಸೇರಿದಂತೆ ಸಭಾಂಗಣ ಕಿಕ್ಕಿರಿದಿತ್ತು.