ಮಡಿಕೇರಿ, ಡಿ. 26 : ನೂತನ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ ಸಂಬಂಧ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಣ್ಣೇಕರ್, ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಇತರರು ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಕಳೆದ ಬಾರಿಯ ಸಭೆಯಲ್ಲಿ ತೀರ್ಮಾನಿಸಿದಂತೆ ಬಸ್ ಸಂಚಾರ ಮಾರ್ಗದ ರಸ್ತೆ ಸಮೀಕ್ಷೆ ನಡೆಸಲಾಗಿ ದೆಯೇ ಎಂದು ಪ್ರಶ್ನಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್ ವನಿತಾ ಮತ್ತು ನಗರ ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ಸರ್ವೇ ಕಾರ್ಯ ಮಾಡಲಾಗಿದೆ. ರಾಜಾಸೀಟು, ಎಲ್‍ಐಸಿ ಮಾರ್ಗದ ರಸ್ತೆ ವಿಸ್ತರಣೆ ಮಾಡಬೇಕಿದ್ದು, ಒಂದು ಬದಿ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಕಾಲಾವಕಾಶ ಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ರಾಜಾಸೀಟು, ಎಲ್‍ಐಸಿ ಮಾರ್ಗದ ರಸ್ತೆ ಬದಿ ಅಗಲೀಕರಣ ಸಂಬಂಧ ಸಾರ್ವಜನಿಕರನ್ನು ಕರೆಸಿ ಮಾತನಾಡುವದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸದ್ಯ ಕೈಗಾರಿಕಾ ಬಡಾವಣೆಯ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ತೆಗೆದರೆ ದ್ವಿಮುಖವಾಗಿ ವಾಹನಗಳು ಸಂಚರಿಸಬಹುದಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸದ್ಯಕ್ಕೆ ಖಾಸಗಿ ಬಸ್‍ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ. ತಾತ್ಕಾಲಿಕ ವ್ಯವಸ್ಥೆ ಹಾಗೂ ಮುಂದಿನ ದೀರ್ಘಾವಧಿ ಯೋಜನೆ ಬಗ್ಗೆ ಯೋಚಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೈಗಾರಿಕಾ ಬಡಾವಣೆಯಲ್ಲಿ ಪಾದಚಾರಿ ಮಾರ್ಗ ಇನ್ನೂ ವ್ಯವಸ್ಥಿತ ವಾಗಿ ನಿರ್ಮಾಣ ಮಾಡಬೇಕು ಎಂದು ಹಲವರು ಸಲಹೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಇತರರು ಹಲವು ಸಲಹೆ ನೀಡಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಪೌರಾಯುಕ್ತ ಎಂ.ಎಲ್. ರಮೇಶ್, ಎಇಇ ಹೇಮಂತ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ ಇತರರು ಇದ್ದರು.