ಕುಶಾಲನಗರ, ಡಿ. 26: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಕಲ್ಪಿಸಲಾಗಿದ್ದ ಸಾಂತ್ವನ ಕೇಂದ್ರವನ್ನು ಸ್ಥಗಿತಗೊಳಿಸಿದ್ದು 35 ಕುಟುಂಬ ಸದಸ್ಯರುಗಳನ್ನು ಕೇಂದ್ರದಿಂದ ಬೀಳ್ಕೊಡಲಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಕುಶಾಲನಗರ ವಾಲ್ಮೀಕಿ ಕೇಂದ್ರದಲ್ಲಿ ನೆಲೆಸಿದ್ದ ಒಟ್ಟು 87 ಸದಸ್ಯರನ್ನು ಕಳೆದ ಎರಡು ದಿನಗಳ ಹಿಂದೆ ಕಳುಹಿಸಿಕೊಡಲಾಗಿದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಮಾಹಿತಿ ನೀಡಿದ್ದಾರೆ.
ಸಂತ್ರಸ್ತ ಕುಟುಂಬ ಸದಸ್ಯರಿಗೆ ಬಾಡಿಗೆ ಮನೆಯಲ್ಲಿ ನೆಲೆಸಲು ಮಾಸಿಕ ರೂ. 10 ಸಾವಿರ ಬಾಡಿಗೆ ಹಣವನ್ನು ಸರಕಾರ ನೀಡಲಿದ್ದು ಈಗಾಗಲೆ ರೂ. 3800 ಮತ್ತು ರೂ. 50 ಸಾವಿರ ಸಂತ್ರಸ್ತರ ಖಾತೆಗಳಿಗೆ ಜಮಾ ಮಾಡಲಾಗಿದೆ. 10 ತಿಂಗಳ ಕಾಲ ಬಾಡಿಗೆ ಹಣ ಪಾವತಿ ಮಾಡಲಾಗುವದು ಎಂದು ತಿಳಿಸಿದ ತಹಶೀಲ್ದಾರ್ ಮಹೇಶ್ ನಂತರ ಸಂತ್ರಸ್ತರಿಗೆ ನಿರ್ಮಾಣಗೊಳ್ಳುತ್ತಿರುವ ಮನೆಗಳಿಗೆ ಅವರನ್ನು ಸ್ಥಳಾಂತರಿಸಲಾಗುವದು ಎಂದು ತಿಳಿಸಿದ್ದಾರೆ.
ಕುಶಾಲನಗರ ವಾಲ್ಮೀಕಿ ಕೇಂದ್ರದಲ್ಲಿ ಒಟ್ಟು 157 ಕುಟುಂಬದ 400ಕ್ಕೂ ಅಧಿಕ ಮಂದಿ ನೆಲೆಸಿದ್ದರು. ಬಹುತೇಕ ಜನ ತಮ್ಮ ಮನೆಗಳಿಗೆ ಹಿಂತಿರುಗಿದ್ದು ಇದೀಗ ಮಕ್ಕಂದೂರು, ಹಾಲೇರಿ, ಮಡಿಕೇರಿ ವ್ಯಾಪ್ತಿಯ 35 ಕುಟುಂಬ ಸದಸ್ಯರು ಅಂತಿಮವಾಗಿ ಕೇಂದ್ರದಿಂದ ಬಾಡಿಗೆ ಮನೆಗಳಿಗೆ ತೆರಳಿದ್ದಾರೆ.