ಕುಶಾಲನಗರ: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ ನೀಡಲಾಯಿತು.
ಹೆಬ್ಬಾಲೆಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಎನ್.ಎಸ್.ಎಸ್. ಶಿಬಿರಗಳು ಸಹಕಾರಿಯಾಗಲಿದೆ ಎಂದರು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಹೆಚ್.ಬಿ. ಲಿಂಗಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಟಿ.ಎಂ. ಸುಧಾಕರ್ ಪ್ರಾಸ್ತಾವಿಕ ನುಡಿಗಳಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಲ್. ರಮೇಶ್, ಉಪನ್ಯಾಸಕರುಗಳಾದ ವಸಂತಕುಮಾರಿ, ಪಿ.ಟಿ. ಕಾಶಿಕುಮಾರ್, ಹೆಚ್.ಎಸ್. ಗಣೇಶ್, ಕೆ.ಎಸ್. ಮೀನಾಕ್ಷಿ ಇದ್ದರು.
ವಿದ್ಯಾರ್ಥಿಗಳಾದ ಕೆ.ಆರ್. ಲವ್ಯ ನಿರೂಪಿಸಿದರು, ಆಲಿಯ ಭಾನು ವಂದಿಸಿದರು.ಶನಿವಾರಸಂತೆ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮಸಭೆ ಕೊಡ್ಲಿಪೇಟೆ ಅಂಬೇಡ್ಕರ್ ಭವನದಲ್ಲಿ ವಿದ್ಯಾರ್ಥಿ ನಾಯಕ ಆದರ್ಶ ಅಧ್ಯಕ್ಷತೆಯಲ್ಲಿ ನಡೆಯಿತು.
ಮಕ್ಕಳ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳ ಶೌಚಾಲಯ, ಕುಡಿಯುವ ನೀರಿನ ಘಟಕ, ಶಾಲೆಗಳ ತಡೆಗೋಡೆ, ರಸ್ತೆ ಮುಂತಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದರು.
ಅಧ್ಯಕ್ಷತೆ ವಹಿಸಿದ್ದ ಆದರ್ಶ ಮಾತನಾಡಿ, ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಮಾಡಬೇಡಿ. ಎಲ್ಲಾ ಸರಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಹಾಕಿಸಿ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಎಂದರು.
ಶಾಲಾಭಿವೃದ್ಧಿ ಸಮಿತಿ ನಾಗೇಶ್ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ 15 ಮಂದಿ ಸದಸ್ಯರುಗಳಿದ್ದು ಅವರಲ್ಲಿ ಇಂದು ಮಕ್ಕಳ ಗ್ರಾಮಸಭೆಗೆ ಕೇವಲ 5 ಮಂದಿ ಸದಸ್ಯರುಗಳು ಮಾತ್ರ ಭಾಗವಹಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಮುಕುಂದ, ಗ್ರಾ.ಪಂ. ಅಧ್ಯಕ್ಷೆ ರೋಹಿಣಿ ಸುಬ್ರಮಣ್ಯಾಚಾರ್, ಸದಸ್ಯ ದೌಲತ್ ಹುಸೇನ್ ಕಾರ್ಯಕ್ರಮ ಉದ್ಘಾಟನೆ ಮಾಡಿದ ಉಪಾಧ್ಯಕ್ಷ ಡಿ.ಬಿ. ವಿಜಯ್ ಮಾತನಾಡಿದರು.
ಸಭೆಯಲ್ಲಿ ಸದಸ್ಯರುಗಳಾದ ಗೀತಾ, ಲಕ್ಷ್ಮಿ, ಶಾಲಾ ಶಿಕ್ಷಕರುಗಳು, ಆರೋಗ್ಯ ಇಲಾಖೆ ಪ್ರತಿನಿಧಿಗಳು, ಅಂಗನವಾಡಿ ಶಿಕ್ಷಕಿಯರು ಹಾಗೂ ವಿವಿಧ ಇಲಾಖೆಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿಕೃಷ್ಣ ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ನಿರೂಪಿಸಿ, ವಂದಿಸಿದರು.
ಸೋಮವಾರಪೇಟೆ: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ವತಿಯಿಂದ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ, ಸಹಕಾರ ಚಳುವಳಿ ಮತ್ತು ಸಾಮಾಜಿಕ ಹೊಣೆಗಾರಿಕೆ ವಿಷಯದ ಬಗೆಗಿನ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಇಲ್ಲಿನ ಜ್ಞಾನವಿಕಾಸ ಶಾಲೆಯ ವಿದ್ಯಾರ್ಥಿ ಕೆ.ಆರ್. ಪ್ರವೀಣ್ ತೃತೀಯ ಬಹುಮಾನ ಪಡೆದಿದ್ದಾನೆ.ಒಡೆಯನಪುರ: ಹಾಸನದ ನ್ಯಾಷನಲ್ ಶೋಟೋಕಾಸ್ ಕರಾಟೆ ಮಲ್ಟಿಪರ್‍ಪಸ್ ಸಂಸ್ಥೆ ವತಿಯಿಂದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕರಾಟೆ ತರಬೇತುದಾರ ಬಿ.ಕೆ. ಪರಮೇಶ್ ಅವರನ್ನು ಅತ್ಯುತ್ತಮ ಕರಾಟೆ ತರಬೇತಿದಾರ ಎಂದು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಗೋಣಿಕೊಪ್ಪ: ಇಲ್ಲಿನ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೊಡಗು ಫಾರ್ ಟುಮಾರೋ ಸಹಯೋಗದಲ್ಲಿ ಸ್ವಚ್ಛ ಭಾರತ್ ಬಗ್ಗೆ ಮಾಹಿತಿ ನೀಡಲಾಯಿತು.
ಬೆಂಗಳೂರಿನ ಎಕೊಲವ್ ವೆಬ್‍ಸೈಟ್ ಸಂಸ್ಥಾಪಕಿ ಗಾಯತ್ರಿ ಮುರುಳೀಧರ್ ಮಾತನಾಡಿ, ಸ್ವಚ್ಛತೆಯೆಂಬದು ಮೊದಲು ನಮ್ಮ ಮನೆಯಿಂದ ಶುರುವಾಗಬೇಕು. ಮೊದಲು ನಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವದರೊಂದಿಗೆ ದೇಶದ ಸ್ವಚ್ಛತೆಗೆ ಕೈ ಜೋಡಿಸಬೇಕೆಂದರು.
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಗಿಡ ನೆಡುವದರ ಮೂಲಕ ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೊಡಗು ಫಾರ್ ಟುಮಾರೋ ತಂಡದ ಸದಸ್ಯರು, ಯೋಜನಾಧಿಕಾರಿಗಳಾದ ಮಂದೆಯಂಡ ಎನ್. ವನಿತ್‍ಕುಮಾರ್, ಮಚ್ಚಮಾಡ ರೀತಾ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.