ಮಡಿಕೇರಿ, ಡಿ. 26: ಸುಮಾರು 35ಕ್ಕೂ ಅಧಿಕ ಯುವಕರು ಭೂತನ ಕಾಡು ಸೇತುವೆ ಹಾಗೂ ಹೊಳೆಯನ್ನು ಸ್ವಚ್ಛಗೊಳಿಸುವದರೊಂದಿಗೆ ಹಲವಾರು ವರ್ಷಗಳ ಸೇತುವೆಗೆ ಸುಣ್ಣ ಬಳಿಯುವ ಕಾರ್ಯ ಮಾಡಿದ್ದಾರೆ.

ಸುಂಟಿಕೊಪ್ಪ ಸಮೀಪದ ಭೂತನಕಾಡುವಿನ ಓಂ ಶಕ್ತಿ ಯುವಕ ಸಂಘದಿಂದ ಭೂತನಕಾಡುವಿನ ಹೊಳೆಯಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊಳೆಯಲ್ಲಿದ್ದ ಬಟ್ಟೆಗಳು, ಪ್ಲಾಸ್ಟಿಕ್‍ಗಳು, ಬಾಟಲಿಗಳು ಸೇರಿದಂತೆ ವಿವಿಧ ಬಗೆಯ ತಾಜ್ಯಗಳನ್ನು ಯುವಕರು ತೆರವುಗೊಳಿಸಿದರು. ಹೊಳೆಯ ಸುತ್ತ ಹಾಗೂ ಸೇತುವೆಯಲ್ಲಿ ಆವರಿಸಿದ್ದ ಗಿಡಗಂಟಿಗಳನ್ನು ಸ್ವಚ್ಛ ಮಾಡಿದರು. ನಂತರ ಸುಣ್ಣ ಬಳಿಯುವ ಮೂಲಕ ಸೇತುವೆಗೆ ಹೊಸ ರೂಪ ನೀಡಿದರು.

ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಸ್ವಚ್ಛತಾ ಕಾರ್ಯ ಸಂಜೆ ನಾಲ್ಕು ಗಂಟೆಯವರೆಗೂ ನಡೆಯಿತು. ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸೇತುವೆಯ ಕೆಲಭಾಗದಲ್ಲಿ ಬಿದ್ದಿದ್ದ ಬೃಹತ್ ಗಾತ್ರದ ಮರಗಳನ್ನು ಮಿಷನ್ ಮೂಲಕ ಕತ್ತರಿಸಿ, ಹಗ್ಗದ ಸಹಾಯದಿಂದ ಹೊಳೆಯ ಬದಿಗೆ ಸೇರಿಸಿದರು. ಹೊಳೆಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದರು.

ಸ್ವಚ್ಛತಾ ಕಾರ್ಯದಲ್ಲಿ ಪುಟ್ಟ ಮಕ್ಕಳೂ ಸೇರಿದಂತೆ ನಲ್ಲೂರು ತೋಟದ ಸಿಬ್ಬಂದಿಗಳು ಕೂಡ ಪಾಲ್ಗೊಂಡಿದ್ದರು. ಓಂ ಶಕ್ತಿ ಯುವಕ ಸಂಘದ ಅಧ್ಯಕ್ಷ ಪ್ರದೀಶ್, ಪ್ರಧಾನ ಕಾರ್ಯದರ್ಶಿ ಶಂಕರ್, ಹಿರಿಯ ಸದಸ್ಯರಾದ ವಿಠಲ, ಪ್ರವೀಣ್, ಉದಯ, ವಿನೋದ್, ಚಂದ್ರ, ಉಮೇಶ್, ಸದಸ್ಯರಾದ ಅವಿನಾಶ್, ಅನಿಲ್, ಪ್ರಸಾದ್, ಮಂಜುನಾಥ್, ರಂಜಿತ್, ರಮೇಶ, ಚೇತನ್, ಮಂಣಿಕಂಠ, ಯುವರಾಜ್, ಕುಮಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.