ಕುಶಾಲನಗರ, ಡಿ. 25: ನದಿ, ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವಾಸವಿ ಯುವಜನ ಸಂಘದ ಉಪಾಧ್ಯಕ್ಷ ವೈಶಾಖ್ ತಿಳಿಸಿದ್ದಾರೆ. ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ ಕುಶಾಲನಗರದಲ್ಲಿ ನಡೆದ 89ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಶಾಲನಗರ ಕೊಡವ ಸಮಾಜ ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನದಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಬಳಗದ ಕಾರ್ಯವನ್ನು ಶ್ಲಾಘಿಸಿದರು. ಸ್ಥಳೀಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ಕೃಷ್ಣಮೂರ್ತಿಭಟ್ ಪೂಜೆಯೊಂದಿಗೆ ಸಾಮೂಹಿಕ ಆರತಿ ಬೆಳಗಲಾಯಿತು. ಈ ಸಂದರ್ಭ ಸಮಿತಿಯ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ವನಿತಾ ಚಂದ್ರಮೋಹನ್, ಕೇರಳ ಸಮಾಜ ಅಧ್ಯಕ್ಷ ಕೆ.ಆರ್. ಶಿವಾನಂದನ್, ಜರ್ಮನ್ ಪ್ರಜೆ ವಿಬ್ಕೆ ಮತ್ತಿತರರು ಇದ್ದರು.
ಹುಣ್ಣಿಮೆ ಅಂಗವಾಗಿ ಕುಶಾಲನಗರ ಕೊಪ್ಪ ಸಮೀಪ ಕಾವೇರಿ ಪ್ರತಿಮೆಗೆ ಅಭಿಷೇಕ ಮತ್ತು ಆರತಿ ಕಾರ್ಯಕ್ರಮ ನಡೆಯಿತು. ಬಾರವಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು. ಅನ್ನದಾನ ನಡೆಯಿತು.