ಮಡಿಕೇರಿ, ಡಿ. 25: ನಗರದ ಪ್ರತಿಷ್ಠಿತ ಉದ್ಯೋಗ ಮತ್ತು ತರಬೇತಿ ಸಂಸ್ಥೆಯು (ಐ.ಟಿ.ಐ) ನುರಿತ ತರಬೇತಿದಾರರ ಕೊರತೆಯಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಅಲ್ಲಿನ 200ಕ್ಕೂ ಅಧಿಕ ಐ.ಟಿ.ಐ ವಿದ್ಯಾರ್ಥಿಗಳು ಸಮರ್ಪಕ ಶಿಕ್ಷಣ ತರಬೇತಿ ಲಭಿಸದೆ ದೈನಂದಿನ ಚಟುವಟಿಕೆಯಿಂದ ಹೊರಗುಳಿಯು ವಂತಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದು; ಈ ಸಂಸ್ಥೆಗೆ ಕಾಯಕಲ್ಪ ನೀಡುವಂತೆ ಆಗ್ರಹಿಸಿದ್ದಾರೆ. ಒಂದೊಮ್ಮೆ ಪ್ರೌಢ ಶಿಕ್ಷಣದ ಬಳಿಕ ಕಾಲೇಜು ಶಿಕ್ಷಣಕ್ಕೆ ಬದಲಾಗಿ ಭವಿಷ್ಯವನ್ನು ಮುಂದಿರಿಸಿಕೊಂಡು ನೂರಾರು ವಿದ್ಯಾರ್ಥಿಗಳು ಈ ಉದ್ಯೋಗ ಮತ್ತು ತರಬೇತಿ ಸಂಸ್ಥೆಗೆ ಸೇರ್ಪಡೆಗೊಳ್ಳುತ್ತಿದ್ದರು. ಮಾತ್ರವಲ್ಲದೆ, ಸಕಾಲದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಅಧೀನ ಸಂಸ್ಥೆಗಳಲ್ಲಿ ಉದ್ಯೋಗಕ್ಕೂ ಅರ್ಹತೆ ಹೊಂದುತ್ತಿದ್ದರು.
ಪ್ರಸಕ್ತ ಸಾಲಿನಲ್ಲಿಯೂ ಈ ತರಬೇತಿ ಸಂಸ್ಥೆಗೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರ್ಪಡೆ ಗೊಂಡಿದ್ದರೂ ಕೂಡ, ತರಬೇತಿ ಅಧಿಕಾರಿಗಳ ಕೊರತೆಯಿಂದ ಅನೇಕರು ತರಗತಿ ಅವಧಿಯಲ್ಲಿ ಕೇಂದ್ರದಿಂದ ಹೊರಗುಳಿಯುತ್ತಿರುವ ಆತಂಕಕಾರಿ ಬೆಳವಣಿಗೆ ಗೋಚರಿಸಿದೆ. ಇಲ್ಲಿ ಮುಖ್ಯವಾಗಿ ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಷಿನಿಷ್ಟ್, ಟರ್ನರ್, ವೆಲ್ಡರ್ ತರಬೇತಿಯನ್ನು ನೀಡಲಾಗುತ್ತಿದೆ ಯಾದರೂ ಯಾವದಕ್ಕೂ ಪ್ರಮುಖ ತರಬೇತಿ ಅಧಿಕಾರಿಗಳಿಲ್ಲ.
ಅಲ್ಲದೆ, ಇಲ್ಲಿ ತರಬೇತಿಗೊಳ್ಳುವ ಅಭ್ಯರ್ಥಿಗಳು ಭವಿಷ್ಯದಲ್ಲಿ ಕೆ.ಎಸ್.ಆರ್.ಟಿ.ಸಿ, ಚೆಸ್ಕಾಂ, ಬಿ.ಹೆಚ್.ಇ.ಎಲ್, ಬಿ.ಇ.ಎಂ.ಎಲ್, ಹೆಚ್.ಎ.ಎಲ್., ಎನ್.ಎ.ಎಲ್., ಬಾಸ್ಜ್ನಂತ ಸರಕಾರಿ ಹಾಗೂ ಸರಕಾರೇತರ
(ಮೊದಲ ಪುಟದಿಂದ) ಸಂಸ್ಥೆಗಳಲ್ಲಿ ಉದ್ಯೋಗ ಕಂಡುಕೊಳ್ಳಲು ಅವಕಾಶವಿದೆ. ಇಂಥ ಪ್ರತಿಷ್ಟಿತ ಉದ್ಯೋಗ ಮತ್ತು ತರಬೇತಿ ಸಂಸ್ಥೆಯಲ್ಲಿ ಇಂದು ಸರಕಾರದ ನಿರ್ಲಕ್ಷ್ಯದಿಂದ ಮಂಜೂರಾಗಿರುವ ಒಟ್ಟು 28 ಹುದ್ದೆಯಲ್ಲಿ ಕೇವಲ ಇಬ್ಬರು ಕರ್ತವ್ಯ ನಿರ್ವಹಿಸುತ್ತಿರುವದು ಬೆಳಕಿಗೆ ಬಂದಿದೆ.
ಅಲ್ಲದೆ, ಕೊಡಗಿನ ಮಳೆಗಾಲದಲ್ಲಿ ಮೇಲಿಂದ ಮೇಲೆ ಈ ಸಂಸ್ಥೆಯಲ್ಲಿರುವ ಯಂತ್ರೋಪರಖರಣಗಳು ಕೆಟ್ಟು ಹೋಗಿದ್ದು, ಅವುಗಳ ರಿಪೇರಿ ಮಾಡುವವರು ಲಭಿಸದೆ ಶಿಕ್ಷಣಾಧಿಗಳ ತರಬೇತಿಗೆ ಹತ್ತು ಹಲವು ಆಡಚಣೆಗಳನ್ನು ಎದುರಿಸುವಂತಾಗಿದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಉದ್ಯೋಗ ಕೌಶಲ್ಯ ಯೋಜನೆಗಳು ಜಾರಿಗೊಂಡಿದ್ದರೂ ಇಲ್ಲಿ ಅನುಷ್ಠಾನಗೊಳ್ಳದಾಗಿದೆ.
ಇನ್ನೊಂದೆಡೆ ಲಕ್ಷಾಂತರ ರೂಪಾಯಿ ಮೌಲ್ಯದ ಹೊಸ ಹೊಸ ಯಂತ್ರಗಳು ಇಲ್ಲಿಗೆ ಸರಬರಾಜುಗೊಂಡಿದ್ದರೂ, ಅವುಗಳ ನಿರ್ವಹಣೆಗ ತಜ್ಞರುಗಳಿಲ್ಲದೆ ವಿದ್ಯಾರ್ಥಿಗಳು ತಂತ್ರಜ್ಞಾನ ಕುರಿತು ತರಬೇರಿಗೊಳ್ಳಲು ಅವಕಾಶ ವಂಚಿತರಾಗಿದ್ದಾರೆ.
ಕೈಬೆರಳಿಣಿಕೆ ಅಧಿಕಾರಿಗಳು : ಮಡಿಕೇರಿಯ ಈ ಸರಕಾರಿ ಉದ್ಯೋಗ ಮತ್ತು ತರಬೇರಿ ಸಂಸ್ಥೆಯಲ್ಲಿ ಪ್ರಾಂಶುಪಾಲರ ಸಹಿತ ಇರುವ ಮೂರ್ನಾಲ್ಕು ಮಂದಿ ದೈನಂದಿನ ಆಡಳಿತ ವ್ಯವಹಾರ ನೋಡಿಕೊಳ್ಳುವಲ್ಲಿ ಸಮಯ ಮುಗಿದು ಹೋಗುವಂತಾಗಿದೆ.
40 ಲಕ್ಷ ಹಣ : ನಗರದ ಈ ಪ್ರತಿಷ್ಠಿತ ಸಂಸ್ಥೆಗೆ ಕಾಯಕಲ್ಪ ನೀಡಲು ಸರಕಾರದಿಂದ ರೂ. 40 ಲಕ್ಷ ಬಿಡುಗಡೆಗೊಂಡಿದ್ದರೂ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಸ್ಥೆಯ ಕಟ್ಟಡಕ್ಕೆ ಕಾಯಕಲ್ಪ ಲಭಿಸಿಲ್ಲ. ಸುಣ್ಣ ಬಣ್ಣ ಇತ್ಯಾದಿ ಕಾಣದೆ ಒಂದೆಡೆ ಇಡೀ ತರಬೇತಿ ಸಂಸ್ಥೆ ಶಿಥಿಲಗೊಳ್ಳುತ್ತಿದ್ದರೆ, ವಿದ್ಯುತ್ ಇತ್ಯಾದಿ ಸಮಸ್ಯೆ ಎದುರಿಸುವಂತಾಗಿದೆ.
ಹೊರಗಿನಿಂದ ಗಮನಿಸಿದರೆ ಈ ಉದ್ಯೋಗ ಮತ್ತು ತರಬೇರಿ ಸಂಸ್ಥೆಯ ಕಟ್ಟಡ ಯಾವದೋ ಪಾಳು ಬಂಗಲೆಯಂತೆ ಗೋಚರಿಸಿದರೆ, ಒಳ ಹೊಕ್ಕಾಗ ಹಲವು ಕೋಣೆಗಳಲ್ಲಿ ಸರದಿ ಸಾಲಿನ ನಡುವೆ ಯಂತ್ರೋಪಕರಣಗಳು ನಿರುಪಯೋಗದಿಂದ ಸ್ವಾಗತಿಸಲಿವೆ. ಕೊಡಗಿನಲ್ಲಿ ಯಾವದೇ ಬೃಹತ್ ಕೈಗಾರಿಕೆಗಳು ಇತ್ಯಾದಿ ಇಲ್ಲದಿರುವ ಸಂದರ್ಭ, ಈ ಮುಖಾಂತರ ಐ.ಟಿ.ಐ. ತರಬೇತಿಗೊಳ್ಳು ಯುವ ಸಮೂಹಕ್ಕೆ ಸಂಬಂಧಿಸಿದ ಇಲಾಖೆಗಳು ಸ್ಪಂದಿಸಿದರೆ ಭವಿಷ್ಯದಲ್ಲಿ ಅಂಥವರ ಬದುಕು ಉಜ್ವಲವಾದೀತು. ಆ ದಿಸೆಯಲ್ಲಿ ಕೇಂದ್ರ ಹಾಗೂ ರಜ್ಯ ಕೌಶಲ್ಯ ತಂತ್ರಜ್ಞಾನ ಸಚಿವರುಗಳು ಕೂಡ ಇತ್ತ ಕಾಳಜಿ ತೋರಬೇಕಿದೆ.