ಶ್ರೀಮಂಗಲ, ಡಿ. 24: ಕೊಡಗು ಹಿಂದಿನ ಕಾಲದಿಂದಲೂ ನಿರಂತರ ಧಾಳಿಗೆ ತುತ್ತಾಗುತ್ತಿತ್ತು. ಕೊಡಗನ್ನು ಹಾಗೂ ಕೊಡಗಿನ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ದಿನದ 24 ಗಂಟೆಯು ಕಾರ್ಯೋನ್ಮುಖರಾಗಿರಬೇಕಾಗಿತ್ತು. ಕೊಡವರ ಮೇಲೆ ನಡೆದಂತಹ ದೌರ್ಜನ್ಯ ಹಾಗೂ ಕೊಡವ ಸಂಸ್ಕøತಿಯ ಮೇಲೆ ನಡೆದಂತಹ ಧಾಳಿಯನ್ನು ಎದುರಿಸಿಯೂ ಬೆಳೆದು ನಿಂತಿದೆ. ಅಂದಿನ ಕಾಲದಲ್ಲಿ ಒಂದು ರೀತಿಯಲ್ಲಿ ಧಾಳಿ, ದೌರ್ಜನ್ಯಗಳು ಕೊಡವರ ಮೇಲೆ ನಡೆದಿದ್ದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಸೂಕ್ತ ಭದ್ರತೆ ದೊರೆಯದೆ ಅಲ್ಪಸಂಖ್ಯಾತ ಕೊಡವರು ಅಸುರಕ್ಷಿತ ಭಾವನೆ ಎದುರಿಸುತ್ತಿದ್ದಾರೆ. ಈಗಲೂ ತಮ್ಮ ನಾಡು-ನುಡಿಯ ರಕ್ಷಣೆಗಾಗಿ ಹೋರಾಟವನ್ನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಖ್ಯಾತ ಅಂಕಣಕಾರ ಮಾಣಿಪಂಡ ಸಂತೋಷ್ ತಮ್ಮಯ್ಯ ಕಳವಳ ವ್ಯಕ್ತಪಡಿಸಿದರು.
ಅವರು ಪೊನ್ನಂಪೇಟೆಯ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಪುತ್ತರಿ ಉರೋರ್ಮೆ ಹಾಗೂ ಕೊಡವ ಸಾಂಸ್ಕøತಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೊಡಗಿನ ಸುತ್ತಲ ಪ್ರದೇಶಗಳು ನಿರಂತರ ಧಾಳಿ ಒಳಗಾಗಿತ್ತು. ಇಲ್ಲಿನ ಜನ ವೀರತ್ವದಿಂದ ಅದನ್ನು ಎದುರಿಸಿದ್ದರು. ವೈನಾಡು ಪ್ರದೇಶದಿಂದ ಕಣ್ಣೂರು ಪ್ರದೇಶದಿಂದ ಮತ್ತು ಪಿರಿಯಾಪಟ್ಟಣ ಮತ್ತು ಮೈಸೂರು ಸೀಮೆಗಳಿಂದಲೂ ನಿರಂತರ ಧಾಳಿಗೆ ಕೊಡಗು ಬಲಿಯಾಗಿತ್ತು. ಅಲ್ಲದೆ, ಕೊಡಗಿನ ರಾಜರ ಆಡಳಿತದಲ್ಲಿಯೂ ಕೊಡವರ ಮೇಲೆ ದೊಡ್ಡ ಮಟ್ಟದ ದೌರ್ಜನ್ಯ ನಡೆಯಿತು ಎಂದು ಹೇಳಿದರು.
ಇತಿಹಾಸದಲ್ಲಿ ಇಂತಹ ದುರಂತಗಳನ್ನು ಎದುರಿಸಿರುವ ಕೊಡವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಸ್ವತಂತ್ರ ಹಾಗೂ ಸುರಕ್ಷಿತವಾಗಿಲ್ಲ. ಕೊಡವರು ವಾಸ್ತವವನ್ನು ಹೇಳುವ ಅಭಿವ್ಯಕ್ತಿ ಸಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಯಹೂದಿಗಳು, ಗ್ರೀಕರು ಹಾಗೂ ಇಸ್ರೇಲ್‍ನ ಜನತೆ ತಮ್ಮ ಮಾತೃಭಾಷೆಯನ್ನು ಬಳಸದೆ, ಸಂಸ್ಕøತಿಯನ್ನು ನೈಜ್ಯತೆಯೊಂದಿಗೆ ಆಚರಿಸದ ಹಿನ್ನೆಲೆಯಲ್ಲಿ ಅಳಿವಿನಂಚಿನಲ್ಲಿದ್ದಾರೆ. ಕೊಡವ ಭಾಷೆ ಎಂಬದು ಹೃದಯದ ಭಾಷೆಯಾಗಿದ್ದು, ಇದನ್ನು ಬಳಸಲು ಹಿಂದೇಟು ಹಾಕುವದನ್ನು ನಿಲ್ಲಿಸಬೇಕೆಂದು ಮಾರ್ಮಿಕವಾಗಿ ನುಡಿದರು. ಕೊಡವ ಮೂಲ ಸಂಸ್ಕøತಿಯನ್ನು ಮರೆಯದೆ ಆಚರಣೆಯ ಮೂಲಕ ಅದನ್ನು ಉಳಿಸಿಕೊಂಡು ಹೋಗಲು ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಕೊಡವ ಧೀನಬಂದು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಕಟ್ಟೆರ ಕೆ.ಕಾರ್ಯಪ್ಪ ಮಾತನಾಡಿ ಕೊಡವರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ತಮ್ಮ ಜನಾಂಗದ ಬಡ ಹಾಗೂ ಪೋಷಕರಿಲ್ಲದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು, ಧೀನಬಂದು ಟ್ರಸ್ಟ್‍ನಿಂದ ಪ್ರಸಕ್ತ ವರ್ಷ 20 ಲಕ್ಷ ರೂ. ಹಣವನ್ನು ಕೊಡವ ಮಕ್ಕಳ ಶಿಕ್ಷಣಕ್ಕೆ ನೀಡಲಾಗಿದೆ. ಇದರಲ್ಲಿ 21 ಕೊಡವ ಮಕ್ಕಳು ತಂದೆ ಇಲ್ಲದ ಮಕ್ಕಳಾಗಿದ್ದಾರೆ ಎಂದು ಹೇಳಿದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಅತ್ಯವಶ್ಯ. ಆದರೆ, ಮನೆಯಲ್ಲಿ ಮಕ್ಕಳಿಗೆ ಕೊಡವ ಭಾಷೆಯನ್ನು ಕಲಿಸಿಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಅವರು ಕೊಡವರ ಹಬ್ಬಗಳನ್ನು ಮಕ್ಕಳೊಂದಿಗೆ ಆಚರಿಸಬೇಕು. ಕೊಡವ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಭಾಷೆಯ ಮೇಲೆ ಅಭಿಮಾನವಿದ್ದರೆ ಸಂಸ್ಕøತಿ ಉಳಿಯುತ್ತದೆ. ಪೋಷಕರು ಸುಸಂಸ್ಕøತರಾದರೆ ಮಕ್ಕಳು ಸಹ ಒಳ್ಳೆಯ ಹಾದಿಯಲ್ಲಿ ನಡೆಯುತ್ತಾರೆಂದು ಹೇಳಿದರು.
ನಡಿಕೇರಿಯ ತಪಸ್ಯಾ ಶಾಲೆಯ ಪ್ರಾಂಶುಪಾಲರಾದ ಚೊಟ್ಟೆಕಾಳಪಂಡ ಪ್ರಥ್ವಿಕ್ ಪೂಣಚ್ಚ ಅವರು ಮಾತನಾಡಿ ಕೊಡವ ಮಕ್ಕಳು ಸರಕಾರಿ ಉದ್ಯೋಗಕ್ಕೆ ಸೇರಲು ಅವಕಾಶ ಕಡಿಮೆಯಾಗುತ್ತಿದೆ. ಸರಕಾರಿ ಉದ್ಯೋಗ ದಕ್ಕಿಸಿಕೊಳ್ಳಲು ಸೂಕ್ತ ತರಬೇತಿ ಹಾಗೂ ಪೂರ್ವಸಿದ್ಧತೆಯ ಅಗತ್ಯತೆಯ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಖಜಾಂಚಿ ಮೂಕಳೇರ ಲಕ್ಷ್ಮಣ, ಸಹಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಚೆಪ್ಪುಡೀರ ರಾಕೇಶ್ ದೇವಯ್ಯ, ಚೆಪ್ಪುಡೀರ ರೂಪ ಉತ್ತಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಅಡ್ಡಂಡ ಸುನೀಲ್, ಮೂಕಳಮಾಡ ಅರಸು ನಂಜಪ್ಪ, ಖಾಯಂ ಆಹ್ವಾನಿತರಾದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಕಾರ್ಯಕ್ರಮ ಸಂಯೋಜಕ ಕಾಳಿಮಾಡ ಮೋಟಯ್ಯ ಉಪಸ್ಥಿತರಿದ್ದರು. ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ ಉಳುವಂಗಡ ಲೋಹಿತ್ ಭೀಮಯ್ಯ ಜಬ್ಭೂಮಿ ಬಾಳೋ ಹಾಡು ಹಾಡಿದರು.