ಮಡಿಕೇರಿ, ಡಿ. 24: ಪ್ರಕೃತಿ ವಿಕೋಪ ಸಂದರ್ಭ ಬೆಳೆಗಾರರ ಜಮೀನುಗಳಲ್ಲಿದ್ದ ಬೆಲೆ ಬಾಳುವ ಮರಗಳು ಧರೆಗುರುಳಿವೆ. ಈ ಮರಗಳನ್ನು ಹರಾಜು ಹಾಕಿ ಅದರಿಂದ ಸಿಗುವ ಹಣವನ್ನು ಸಂತ್ರಸ್ತ ಬೆಳೆಗಾರರಿಗೆ ಹಂಚಬೇಕೆಂದು ಆಗ್ರಹಿಸಿ ಪ್ರಕೃತಿ ವಿಕೋಪ ಸಂತ್ರಸ್ತರ ಪರಿಹಾರ ಹೋರಾಟ ಸಮಿತಿ ಮೂಲಕ ಸಂತ್ರಸ್ತ ಬೆಳೆಗಾರರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರಕೃತಿ ವಿಕೋಪ ಸಂದರ್ಭ ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ಮರಗಳು ಧರೆಗುರುಳಿ ಕೊಚ್ಚಿ ಹೋಗಿವೆ. ಆ ಮರಗಳು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕೆ ಸಂತ್ರಸ್ತರ ವಿರೋಧವಿದೆ. ಈ ಮರಗಳು ಇಲಾಖೆಗೆ ಸೇರಿದ್ದಲ್ಲ. ಮರಗಳನ್ನು ಹರಾಜು ಮಾಡಿ ಸಂಗ್ರಹವಾಗುವ ಮೊತ್ತವನ್ನು ಆಯಾ ಪ್ರದೇಶಗಳ ಸಂತ್ರಸ್ತರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ. ದೇವಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.