ವೀರಾಜಪೇಟೆ, ಡಿ. 24: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ಆಶಾ ಎಂಬಾಕೆಗೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಕಡಂಗಮರೂರು ಗ್ರಾಮದ ಕಾರ್ಮಿಕ ಎಚ್.ಬಿ. ಪಾಪು ಎಂಬಾತನಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಇಂದು ಎರಡು ಐ.ಪಿ.ಸಿ ವಿಧಿಗಳಡಿ ತಲಾ ಮೂರು ವರ್ಷ ಸಜೆ ಹಾಗೂ ರೂ 15000 ದಂಡ ಪಾವತಿಸುವಂತೆ ತೀರ್ಪು ನೀಡಿದ್ದಾರೆ.

ಕಳೆದ ತಾ 11.3.18 ರಂದು ರಾತ್ರಿ ಎಚ್.ಬಿ. ಪಾಪು ನಿಶಾಮತ್ತನಾಗಿ ಮನೆಗೆ ಬಂದು ಪತ್ನಿ ಆಶಾಳೊಂದಿಗೆ ಜಗಳ ತೆಗೆದು ತನ್ನ ಕೈಯ್ಯಲ್ಲಿದ್ದ ಕತ್ತಿಯಿಂದ ಕುತ್ತಿಗೆ, ಎಡ ಭುಜ, ಬಲ ಕೈ ಮಣಿಗಂಟಿಗೆ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ ದೂರಿನ ಮೇರೆ ಗ್ರಾಮಾಂತರ ಪೊಲೀಸರು ಪಾಪುವನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿ ಐ.ಪಿ.ಸಿ. 307, 326 ಹಾಗೂ 498ರ ಪ್ರಕಾರ ಪ್ರಕರಣ ದಾಖಲಿಸುವದರೊಂದಿಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಐ.ಪಿ.ಸಿ. 326 ವಿಧಿ ಹಾಗೂ ಐಪಿಸಿ 498ರಡಿ ತಲಾ ಮೂರು ವರ್ಷ ಸಜೆ ರೂ 15000 ದಂಡ ವಿಧಿಸಿ ತೀರ್ಪು ನೀಡಿದ್ದು ದಂಡ ಪಾವತಿಸಲು ತಪ್ಪಿದರೆ ಮತ್ತೆ 6 ತಿಂಗಳ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಗಾಯಾಳು ಆಶಾಳ ತಾಯಿ ತಾ. 12.3.18 ರಂದು ಪೊಲೀಸರಿಗೆ ದೂರು ನೀಡಿದ್ದರು. ಹಲ್ಲೆಯಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ ಆಶಾಳನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು.