ಕುಶಾಲನಗರ, ಡಿ. 24: ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದ ಮಹಿಳೆಯರ ಶೌಚಾಲಯದಲ್ಲಿ ದನದ ಮಾಂಸವನ್ನು ಇಟ್ಟುಕೊಂಡು ಮಾರಾಟ ಮಾಡಲೆತ್ನಿಸಿದ ಮಹಿಳೆಯೋರ್ವಳನ್ನು ಸಾರ್ವಜನಿಕರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಹೊಸೂರು ಗ್ರಾಮದ ಗೌರಮ್ಮ ಎಂಬ ಮಹಿಳೆ ಹುಣಸೂರಿನಿಂದ ತಲಾ ಒಂದು ಕೆಜಿ ತೂಕದ ದನದ ಮಾಂಸ ತಂದು ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿರುವ ಮಹಿಳಾ ಶೌಚಾಲಯದ ಕೊಠಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ಬೀಗ ಜಡಿದು ತೆರಳಿದ್ದ ದೃಶ್ಯ ಕಂಡುಬಂದಿತ್ತು. ಆಗಾಗ್ಗೆ ಗೌರಮ್ಮ ಬಂದು ಮಾಂಸವನ್ನು ಕುಶಾಲನಗರ ಪಟ್ಟಣದ ವಿವಿಧೆಡೆ ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವು ದೊರೆತ ಬಸ್ ನಿಲ್ದಾಣದ ನಿಯಂತ್ರಾಣಾಧಿಕಾರಿ ಹರಿನಾಥ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಬೀಗ ತೆಗೆಸಿದ ಸಂದರ್ಭ ಶೌಚಾಲಯದಲ್ಲಿ ಚೀಲದಲ್ಲಿ ಸಂಗ್ರಹಿಸಿಟ್ಟ ದನದ ಮಾಂಸ ಕಂಡುಬಂದಿದೆ. ಈ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದಾಗ ತಾನು ಹುಣಸೂರಿನಿಂದ ದನದ ಮಾಂಸ ತಂದಿರುವದಾಗಿ ತಪ್ಪೊಪ್ಪಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‍ಆರ್‍ಟಿಸಿ ಅಧಿಕಾರಿ ಹರಿನಾಥ್ ಶೌಚಾಲಯ ನಿರ್ವಹಣೆ ಗುತ್ತಿಗೆದಾರರ ಮೇಲೆ ದೂರು ನೀಡುವದಾಗಿ ಮಾಹಿತಿ ಒದಗಿಸಿದ್ದಾರೆ.
ಸ್ಥಳದಲ್ಲಿದ್ದ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಯುವಮೋರ್ಚಾ ತಾಲೂಕು ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ ಮತ್ತು ಪಂಚಾಯ್ತಿ ಸದಸ್ಯೆ ಶೈಲಾ ಕೃಷ್ಣಪ್ಪ ಅವರುಗಳು ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.