ಸೋಮವಾರಪೇಟೆ, ಡಿ. 24: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸಾಕಮ್ಮ ಬಂಗಲೆಯ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ 32ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಜಯಕರ್ನಾಟಕ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಹೊಟೇಲ್ ಮಿನಿಸ್ಟರ್ ಕೋಟ್ಸ್ ತಂಡವನ್ನು 13-11 ಅಂಕಗಳಿಂದ ಸೋಲಿಸುವ ಮೂಲಕÀ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನವನ್ನು ಪಡೆಯಿತು. ಸತ್ಯ ಸ್ಪೋಟ್ರ್ಸ್ ಕ್ಲಬ್ ಮತ್ತು ಪಾಂಚಜನ್ಯ ಬಜೆಗುಂಡಿ ತಂಡ ವನ್ನು ಸೋಲಿವುದರೊಂದಿಗೆ ಮೂರನೇ ಸ್ಥಾನ ಪಡೆಯಿತು. ಪ್ರೌಢಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಬೇಳೂರು ವೀರರಾಜೇಂದ್ರ ಪ್ರೌಢಶಾಲೆಯ ತಂಡ ಪ್ರಥಮ, ಭಗತ್ಸಿಂಗ್ ತಣ್ಣೀರುಹಳ್ಳ ತಂಡ ದ್ವಿತೀಯ ಸ್ಥಾನ ಪಡೆಯಿತು. ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ಸಿದ್ದಾಪುರ ತಂಡ ಪ್ರಥಮ ಹಾಗೂ ರಾಕ್ಸ್ಟಾರ್ ಸೋಮವಾರಪೇಟೆ ತಂಡ ದ್ವಿತೀಯ ಸ್ಥಾನ ಗಳಿಸಿತು.
ಉದ್ಯಮಿ ಹರಪಳ್ಳಿ ರವೀಂದ್ರ ಬಹುಮಾನ ವಿತರಿಸಿದರು. ನಂತರ ಮಾತನಾಡಿ, ಮಾನಸಿಕ. ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎಂದು ಹೇಳೀದರು. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಯುವ ಜನಾಂಗ ಪ್ರೀತಿಸಬೇಕು. ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ರಾಷ್ಟ್ರ ಕಂಡ ಧೀಮಂತ ಮಹಿಳೆ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕಳೆದ 32 ವರ್ಷಗಳಿಂದ ಕ್ರೀಡೆಗಳನ್ನು ನಡೆಸಿಕೊಂಡು ಬರುತ್ತಿರುವ ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಸಾಧನೆ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಬೇಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೋಗೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯ ಜೀವನ್, ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಮೊಗೇರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ದಾಮೋಧರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಪ್ರಮುಖರಾದ ಶ್ರೀಧರ್ ಇದ್ದರು. ಪಂದ್ಯಾಟದ ತೀರ್ಪುಗಾರರಾಗಿ ಸತೀಶ್, ಪ್ರವೀಣ್, ಕೃಷ್ಣ, ಇಸಾಕ್, ಅಜೀಜ್ ಕಾರ್ಯನಿರ್ವಹಿಸಿದರು.