ಸೋಮವಾರಪೇಟೆ, ಡಿ. 24: ಸರ್ಕಾರ ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದೂಪರ ಸಂಘಟನೆ ಹಾಗೂ ಕಾರ್ಯಕರ್ತರನ್ನು ಮಟ್ಟಹಾಕುವ ವ್ಯವಸ್ಥಿತ ಹುನ್ನಾರ ನಡೆಸುತ್ತಿವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಶಿವರಾಮ್ ಆರೋಪಿಸಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸುವ ಘಟನೆಗಳಿಗೆ ಸಂಬಂಧಿಸಿದಂತೆ, ಅಲ್ಲಿನ ಸರ್ಕಾರ ಪ್ರತಿಭಟನಾನಿರತ ಹಿಂದೂ ಸಮುದಾಯದವರ ವಿರುದ್ಧ ಮೊಕದ್ದಮೆ ದಾಖಲಿಸಿ, ಹೋರಾಟ ವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು, ತಕ್ಷಣ ಈ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ದೀಪಾವಳಿ ಸಂದರ್ಭ ವಾಯು ಮಾಲಿನ್ಯದ ನೆಪವೊಡ್ಡಿ ಪಟಾಕಿ ಸಿಡಿಸಲು ಕೆಲ ನಿರ್ಬಂಧಗಳನ್ನು ಹೇರಿ ದಂತೆ ಡಿ. 25ರಿಂದ ಕ್ಯಾಲೆಂಡರ್‍ನ ಹೊಸವರ್ಷ ಜ.1ರವರೆಗೂ ಅದೇ ರೀತಿಯ ನಿರ್ಬಂಧ ವಿಧಿಸಲಿ, ಕೇವಲ ಹಿಂದೂ ಸಮುದಾಯದ ಆಚರಣೆಗಳಿಗೆ ಮಾತ್ರ ಕಟ್ಟುಪಾಡು ಗಳನ್ನು ಹಾಕುವದು ಸರಿಯಲ್ಲ ಎಂದು ಶಿವರಾಮ್ ಹೇಳಿದರು.
ಹಿಂದೂ ಸಮಾಜವನ್ನು ಸಂಘಟಿಸುವ ಮೂಲಕ ಜಾಗೃತಿ ಮೂಡಿಸುತ್ತಿರುವ ಸನಾತನ ಸಂಸ್ಥೆ ಸೇರಿದಂತೆ ಹಿಂದೂಪರ ಸಂಘಟನೆ ಗಳನ್ನು ನಿಯಂತ್ರಿಸುವ, ನಿರ್ಬಂಧಿ ಸುವ ಯತ್ನವನ್ನು ಸರ್ಕಾರ ನಡೆಸುತ್ತಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದ ಅವರು, ಮೈಸೂರಿನಲ್ಲಿ ನಡೆದ ಹಿಂದೂಪರ ಕಾರ್ಯಕರ್ತರ ಹತ್ಯೆಯ ಪ್ರಮುಖ ಆರೋಪಿಗಳು ಪತ್ತೆಯಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಚಂದ್ರದ್ರೋಣ ಪರ್ವತದಲ್ಲಿ ಹಿಂದೂ ಅರ್ಚಕರನ್ನೇ ನೇಮಿಸಬೇಕು ಎಂದು ಒತ್ತಾಯಿಸಿದ ಶಿವರಾಮ್, ಹಿಂದೂ ಭಯೋತ್ಪಾದನೆ ಇದೆ ಎಂದು ಸಾಬೀತುಪಡಿಸಲು ಸರ್ಕಾರವೇ ಕೆಲ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದರು. ಒಟ್ಟಾರೆ ಹಿಂದೂಗಳ ಧಾರ್ಮಿಕ ಭಾವನೆ, ಶ್ರದ್ಧಾಕೇಂದ್ರ, ಸಂಘಟನೆಗಳ ಮೇಲಿನ ಧಾಳಿಗಳನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಲಕ್ಷ್ಮೀಕಾಂತ್, ಪಿ. ಮಧು, ರಮೇಶ್, ರತ್ನಕುಮಾರ್, ಕಿಬ್ಬೆಟ್ಟ ಮಧು, ನೆಹರು, ಈರಪ್ಪ, ಆನಂದ್, ಮನುಕುಮಾರ್, ಸೋಮೇಶ್, ಪ್ರಮೋದ್, ಸುಜಿತ್, ಪ್ರಸನ್ನ, ನಂದಕುಮಾರ್, ಅಭಿಮನ್ಯುಕುಮಾರ್, ಶರತ್ ಸೇರಿದಂತೆ ಇತರರು ಭಾಗವಹಿಸಿದ್ದರು.