ಸಿದ್ದಾಪುರ, ಡಿ. 24 : ಕಾರ್ಮಿಕರ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಖಾಸಗಿ ತೋಟದ ಮುಖ್ಯ ಕಛೇರಿಯ ಬಳಿ ತೋಟ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಸಿದ್ದಾಪುರ ಸಮೀಪದ ಬಿಬಿಟಿಸಿ ಕಂಪೆನಿಗೆ ಸೇರಿದ ಎಂಟು ವಿಭಾಗದ ಕಾಫಿ ತೋಟದ ಸುಮಾರು 400 ಕ್ಕೂ ಅಧಿಕ ಕಾರ್ಮಿಕರು ಚೌಡಿಕಾಡು ತೋಟದಿಂದ ಎಲ್ ಕಿಲ್ ತೋಟದ ಮುಖ್ಯ ಕಚೇರಿಯವರೆಗೆ ಮೆರವಣಿಗೆ ತೆರಳಿ ನಂತರ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕರು ಮಾತನಾಡಿ ಖಾಸಗಿ ಸಂಸ್ಥೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಶೇ 20 ರಷ್ಟು ಬೋನಸ್ ಹಣ ನೀಡಬೇಕು,ಕಾಡಾನೆ ಹಾಗೂ ಹುಲಿಧಾಳಿಯಾಗದಂತೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕು, ಕಾರ್ಮಿಕರ ವಸತಿ ಗೃಹಗಳನ್ನು ದುರಸ್ತಿಪಡಿಸಿಕೊಡಬೇಕು, ಕಾರ್ಮಿಕರ ಮಕ್ಕಳಿಗೆ ಅಂಗನವಾಡಿ ವ್ಯವಸ್ಥೆ ಕಲ್ಪಿಸಿಕೊಡಬೇಕು, ಕಾಫಿ ತೋಟಗಳಲ್ಲಿ ಸಿಂಪಡಿಸುವ ಕೊರಂಡ ಎಂಬ ಔಷಧಿಯಿಂದ ಮಹಿಳೆಯರಿಗೆ ಅನಾರೋಗ ಸಂಭವಿಸುತ್ತಿದ್ದು, ಈ ಔಷಧಿ ಸಿಂಪಡಿಸುವದನ್ನು ನಿಷೇಧಿಸಬೇಕು, ಗುತ್ತಿಗೆ ಆಧಾರದಲ್ಲಿ ಕೆಲಸಮಾಡುವ ಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸಿಪಿಐ (ಎಂ) ಮುಖಂಡ ಡಾ. ದುರ್ಗಾಪ್ರಸಾದ್ ಮಾತನಾಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಕೂಡಲೇ ಬಿಬಿಟಿಸಿ ಸಂಸ್ಥೆ ಈಡೇರಿಸಬೇಕು, ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ. ಕಾರ್ಮಿಕರ ಬೇಡಿಕೆಯ ಇತ್ಯರ್ಥಕ್ಕೆ ಮೂರು ದಿನಗಳ ಗಡುವು ನೀಡಲಾಯಿತು.

ಕಾರ್ಮಿಕರು ಇಂದು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವ್, ಉಪಕಾರ್ಯದರ್ಶಿ ಹೆಚ್.ಬಿ ರಮೇಶ್, ಪದಾಧಿಕಾರಿಗಳಾದ ವಿನೋದ್, ಮಹೇಶ್ ಇನ್ನಿತರರು ಪಾಲ್ಗೊಂಡಿದ್ದರು.