ಸೋಮವಾರಪೇಟೆ, ಡಿ. 22: ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದ್ದು, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂದು ಇಲ್ಲಿನ ಕುಸುಬೂರು ಎಸ್ಟೇಟ್ ವ್ಯವಸ್ಥಾಪಕ ಕುಶಾಲಪ್ಪ ಅಭಿಪ್ರಾಯಿಸಿದರು. ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸಾಕಮ್ಮನ ಬಂಗಲೆ ಮುಂಭಾಗದಲ್ಲಿ ಆಯೋಜಿಸಲಾಗಿರುವ 32ನೇ ವರ್ಷದ ರಾಜ್ಯಮಟ್ಟದ ಬೆಳ್ಳಿಬಟ್ಟಲಿನ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಲವಷ್ಟು ಗ್ರಾಮೀಣ ಕ್ರೀಡೆಗಳು ಇಂದು ಜನಮಾನಸದಿಂದ ಮರೆಯಾಗುತ್ತಿದ್ದು, ನೆಲದ ಕ್ರೀಡೆಗಳನ್ನು ಉಳಿಸಿ ಬೆಳೆಸುವಂತಾಗಬೇಕು. ಇಂದು ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ ಅನೇಕರು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಹೆಚ್.ಸಿ. ನಾಗೇಶ್ ಮಾತನಾಡಿ, ಕಬಡ್ಡಿ ಕ್ರೀಡೆ ಮರೆಯಾಗುತ್ತಿದೆ ಎನ್ನುವಷ್ಟರಲ್ಲಿ ಪ್ರೋ ಕಬಡ್ಡಿ ಪಂದ್ಯಾಟ ಆಯೋಜನೆಗೊಂಡು ಇಂದು ಎಲ್ಲರಲ್ಲೂ ಕಬಡ್ಡಿಯ ಅಭಿರುಚಿ ಮೂಡುವಂತೆ ಮಾಡುತ್ತಿದೆ. ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಕಳೆದ 32 ವರ್ಷಗಳಿಂದಲೂ ನಿರಂತರವಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಆಯೋಜಿಸಿಕೊಂಡು ಬರುತ್ತಿರುವದು ಶ್ಲಾಘನೀಯ ಎಂದರು.
ಈ ಸಂದರ್ಭ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕೊಡಗು ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಸತೀಶ್, ಪ್ರಮುಖರಾದ ಬಸವರಾಜು, ಶ್ರೀಧರ್, ಯೋಗೇಂದ್ರ, ದಾಮೋಧರ್, ಇಸಾಕ್, ರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಂದ್ಯಾಟದ ಪ್ರಥಮ ದಿನದಲ್ಲಿ ಶಾಲಾ ವಿದ್ಯಾರ್ಥಿಗಳ ತಂಡಗಳ ನಡುವೆ ಕಬಡ್ಡಿ ಪಂದ್ಯಾಟಗಳು ನಡೆದವು. ಪ್ರಾಥಮಿಕ ಶಾಲಾ ಹಂತದಲ್ಲಿ 8 ಮತ್ತು ಪ್ರೌಢಶಾಲಾ ಹಂತದಲ್ಲಿ 6 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.