ಸೋಮವಾರಪೇಟೆ, ಡಿ. 22: ಎಲ್ಲೆಡೆ ಇದೀಗ ಕಾಫಿ ಹಣ್ಣು ಕೊಯ್ಲಿನ ಸಮಯ. ಅರೇಬಿಕಾ ಕಾಫಿ ಗಿಡಗಳಲ್ಲಿ ಹಣ್ಣಾಗಿದ್ದು, ಕೊಯ್ಲು ಕೆಲಸ ಭರದಿಂದ ಸಾಗುತ್ತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಕಾಫಿ ಹಣ್ಣು ವನ್ಯ ಪ್ರಾಣಿ-ಪಕ್ಷಿಗಳ ಪಾಲಿಗೆ ಪ್ರಮುಖ ಆಹಾರವಾಗಿ ಪರಿವರ್ತನೆಯಾಗಿದೆ.

ಅರಣ್ಯ ಪ್ರದೇಶಗಳಲ್ಲಿ ಪ್ರತಿ ವರ್ಷ ಕಾಡ್ಗಿಚ್ಚು ಮಾಮೂಲಿ ಎಂಬಂತಾಗಿದ್ದು, ವನ್ಯ ಪ್ರಾಣಿ-ಪಕ್ಷಿಗಳಿಗೆ ಹಣ್ಣು ಹಂಪಲು ನೀಡುತ್ತಿದ್ದ ಗಿಡಗಳು ಸುಟ್ಟು ಭಸ್ಮವಾಗಿವೆ. ಪರಿಣಾಮ ಇಂತಹ ಜೀವಿಗಳು ಕಾಫಿ ಕೊಯ್ಲು ಸಮಯದಲ್ಲಿ ಆಹಾರಕ್ಕಾಗಿ, ಅನಿವಾರ್ಯವಾಗಿ ಕಾಫಿ ತೋಟಗಳಿಗೆ ಲಗ್ಗೆ ಯಿಡುತ್ತಿವೆ.

ಹಣ್ಣಾಗಿರುವ ಕಾಫಿಯನ್ನು ಕಾಡಾನೆಗಳು, ಕಬ್ಬೆಕ್ಕು, ಅಳಿಲು ಸೇರಿದಂತೆ ಇತರ ವನ್ಯ ಪ್ರಾಣಿಗಳು, ಬಾವಲಿಗಳು, ವಿವಿಧ ಪ್ರಭೇದದ ಪಕ್ಷಿಗಳು ತಿನ್ನುತ್ತಿವೆ. ರೆಂಬೆಯಲ್ಲಿ ಕಾಫಿ ಹಣ್ಣಾಗುತ್ತಿದ್ದಂತೆ ಆನಂದಗೊಳ್ಳುವ ಪ್ರಾಣಿಪಕ್ಷಿಗಳು, ಸಿಪ್ಪೆಯನ್ನು ಕೊಂಬೆಯಲ್ಲಿಯೇ ಬಿಟ್ಟು ರಸಮಿಶ್ರಿತ ಬೇಳೆಯನ್ನು ತಿಂದುಂಡು ಹಸಿವು ನೀಗಿಸಿಕೊಳ್ಳುತ್ತವೆ.

ಕೆಲವೊಂದು ಪ್ರಭೇದದ ಪ್ರಾಣಿ-ಪಕ್ಷಿಗಳು ಕಾಫಿ ಹಣ್ಣನ್ನು ತಿಂದು ಮರದ ಪೊಟರೆಗಳಲ್ಲಿ ಬೇಳೆಯನ್ನು ಶೇಖರಿಸಿಟ್ಟರೆ, ಕೆಲವು ಪ್ರಾಣಿಗಳು ಕಾಫಿ ಬೀಜವನ್ನು ಜೀರ್ಣಿಸಿಕೊಳ್ಳಲಾಗದೇ ತೋಟದೊಳಗೆ ವಿಸರ್ಜಿಸುತ್ತವೆ. ಇಂತಹ ಬೇಳೆಯನ್ನೂ ಸಹ ಕಾರ್ಮಿಕರು ಸಂಗ್ರಹಿಸುತ್ತಾರೆ.

ಕಾಡಾನೆಗಳು ಧಾಳಿ ನಡೆಸದಂತೆ ಸೋಲಾರ್ ಬೇಲಿ, ಕಂದಕಗಳನ್ನು ನಿರ್ಮಿಸಬಹುದು. ಆದರೆ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳು ತೋಟದೊಳಗೆ ಬರದಂತೆ ತಡೆಯೊಡ್ಡುವದು ಅಸಾಧ್ಯ. ಈ ಹಿನ್ನೆಲೆ ಬೆಳೆಗಾರರು ಇಂತಹ ‘ಕಾಟ’ಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವದಿಲ್ಲ. ಕೆಲ ಪ್ರಾಣಿಗಳು ರಾತ್ರಿ ವೇಳೆ ಆಹಾರಕ್ಕಾಗಿ ತೋಟಕ್ಕೆ ಬರುವದರಿಂದ ತಡೆಯೊಡ್ಡುವದೂ ಕಷ್ಟಸಾಧ್ಯ ಎಂದು ತಣ್ಣೀರುಹಳ್ಳದ ಬೆಳೆಗಾರ ರಾಮ್‍ಪ್ರಸಾದ್ ಅಭಿಪ್ರಾಯಿಸುತ್ತಾರೆ. - ವಿಜಯ್