ಸೋಮವಾರಪೇಟೆ, ಡಿ. 22: ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕೆಂದು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ತಿಳಿಸಿದರು.
ಪೊಲೀಸ್ ಠಾಣೆಯ ವತಿಯಿಂದ ಮಾದಾಪುರದ ವಿಎಸ್ಎಸ್ಎನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆಗೆ ಬೀಗ ಹಾಕಿ ನಾಲ್ಕೈದು ದಿನಗಳ ಕಾಲ ಪ್ರವಾಸಕ್ಕೆ ತೆರಳುವ ಸಂದರ್ಭ ಅಕ್ಕಪಕ್ಕದವರು ಹಾಗೂ ಪೊಲೀಸ್ ಠಾಣೆಗೆ ತಿಳಿಸಬೇಕು. ಕಾಫಿ ದಾಸ್ತಾನು ಮಾಡುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಜಾಗ್ರತೆ ವಹಿಸಬೇಕು ಎಂದು ವೃತ್ತ ನಿರೀಕ್ಷಕರು ತಿಳಿಸಿದರು. ವಾಹನ ಚಾಲಕರು ಕಡ್ಡಾಯವಾಗಿ ವಾಹನದ ದಾಖಲಾತಿಗಳನ್ನು ಹೊಂದಿರಬೇಕು. ಪ್ರತಿ ವರ್ಷ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಮೊಬೈಲ್ ಬಳಸಿಕೊಂಡು ವಾಹನ ಚಾಲನೆ ಮಾಡಬಾರದು ಎಂದ ಅವರು, ನಾವು ಕಾನೂನನ್ನು ಗೌರವಿಸಿದರೆ, ಕಾನೂನು ನಮ್ಮನ್ನು ಗೌರವಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಬಿ. ಸುಂದರ್ ಸುವರ್ಣ, ಮಾದಾಪುರ ಗ್ರಾ.ಪಂ. ಸದಸ್ಯರುಗಳಾದ ನಾಪಂಡ ಉಮೇಶ್, ಮಜೀದ್, ಸೋಮಪ್ಪ, ಕೊಪ್ಪತಂಡ ಗಣೇಶ್, ಪಿಡಿಓ ಮಧು, ಆಟೋ ಮಾಲೀಕ ರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.