ಕೂಡಿಗೆ, ಡಿ. 20: ಕೂಡ್ಲೂರು ಸಮೀಪದ ವೀರಭೂಮಿಯ ಎಬಿಸಿ ಅಕಾಡೆಮಿಕ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರಿಗೆ ಹೆಲ್ಮೆಟ್ ಹಾಕಿಸುವ ಮೂಲಕ ಸಂಚಾರಿ ನಿಯಮದ ಅರಿವು ಮೂಡಿಸುವ ಕೆಲಸಕ್ಕೆ ಕುಶಾಲನಗರ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಈ ಸಂದರ್ಭ ಮಾತನಾಡಿದ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಲು ಅಸಡ್ಡೆತನ ತೋರುತ್ತಿದ್ದಾರೆ. ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಹಲವು ಸಾವು ನೋವುಗಳು ಉಂಟಾಗುತ್ತಿವೆ. ಸಾರ್ವಜನಿಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು. ಯೂನಿಕ್ ಅಕಾಡೆಮಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸಂಚಾರಿ ಪೊಲೀಸರ ಸಮ್ಮುಖದಲ್ಲಿ ಶಾಲಾ ವಲಯದಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಲಾಯಿತು. ಶಾಲೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮದ ಬಗ್ಗೆ ತಿಳಿಸಿದರು.

ಈ ಸಂದರ್ಭ ಗ್ರಾಮಾಂತರ ಪೊಲೀಸ್ ಎಎಸ್‍ಐ ಅಪ್ಪಾಜಿ, ಸಂಚಾರಿ ಪೊಲೀಸರಾದ ಶ್ರೀನಿವಾಸ್, ಸಂದೇಶ, ನಾಗರಾಜು ಹಾಗೂ ಯೂನಿಕ್ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕ ರವಿ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.