ಮಡಿಕೇರಿ, ಡಿ. 20: ಕೊಡುಗು ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಇಂದಿನಿಂದ ಮೂರು ದಿವಸ (ತಾ. 22) ತನಕ ಇಲ್ಲಿನ ಪೊಲೀಸ್ ಕೇಂದ್ರ ಮೈದಾನದಲ್ಲಿ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡ ಲಾಯಿತು. ದೈನಂದಿನ ಕರ್ತವ್ಯಗಳ ಒತ್ತಡದ ನಡುವೆ ಒಂದಿಷ್ಟು ಸ್ಫೂರ್ತಿ ಪಡೆಯಲು ಈ ಕ್ರೀಡಾಕೂಟ ಸಹಕಾರಿಯಾಗಿದ್ದು, ಅಂತರ್ರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಪಾರಿವಾಳಗಳನ್ನು ಹಾರಿಬಿಡುವದ ರೊಂದಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಕೊಡಗು ಪೊಲೀಸ್ ದೈನಂದಿನ ಕರ್ತವ್ಯಗಳ ನಡುವೆ ಉತ್ತಮ ಸಾಧನೆಯೊಂದಿಗೆ, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಚಾಪು ಮೂಡಿಸುತ್ತಾ ಬಂದಿದ್ದು, ಇಂಥ ಸಾಧನೆಯೊಂದಿಗೆ ವಿಶ್ವ ಮಟ್ಟದಲ್ಲಿ ಕೊಡಗಿನ ಕೀರ್ತಿ ಪತಾಕೆ ಹಾರಿಸುವಂತೆ ಆಶಿಸಿದರು. ಅಲ್ಲದೆ, ವಿಶ್ವಮಟ್ಟದ ಅನೇಕ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಾಧಕರು ಮೂಲತಃ ಪೊಲೀಸ್ ಇಲಾಖೆಯ ವರದ್ದೆಂದು ನೆನಪಿಸಿದರು.

ಕೊಡಗಿನ ಪ್ರಮುಖ ಹುದ್ದೆಗಳಾದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮಹಿಳೆಯ ರಾಗಿರುವದು ಹೆಮ್ಮೆಯೆಂದು ನುಡಿದ ಅಶ್ವಿನಿ, ಕ್ರೀಡೆಯ ಮುಖಾಂತರ ಶಾರೀರಿಕ ದೃಢತೆ, ಆರೋಗ್ಯ ಹಾಗೂ ಸಾಧನೆಯಲ್ಲಿ ಪೊಲೀಸರು ಮುನ್ನಡೆಯುವಂತೆ ಕರೆ ನೀಡಿದರು.

ಇದೇ ವೇಳೆ ಕ್ರೀಡಾ ಜ್ಯೋತಿ ಯನ್ನು ಅತ್ಯುತ್ತಮ ಪಟು ಗಿರೀಶ್ ಮುಂದಾಳತ್ವದಲ್ಲಿ ಬೆಳಗಿಸಿದರೆ, ಗಾಳಿಯಲ್ಲಿ ಗುಂಡು ಹಾರಿಸಿ ಓಟದ ಸ್ಪರ್ಧೆಗೆ ಚಾಲನೆಯೊಂದಿಗೆ, ಕ್ರೀಡಾ ಸಮನ್ವಯತೆ ಕಾಪಾಡುವ ದಿಸೆಯಲ್ಲಿ ಪ್ರತಿಜ್ಞೆ ಕೈಗೊಳ್ಳಲಾಯಿತು. ಅಬ್ಬಿ ಜಲಪಾತದ ತೈಲವರ್ಣ ಚಿತ್ರವನ್ನು ಅಶ್ವಿನಿ ನಾಚಪ್ಪ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಪೊಲೀಸ್ ಕಲಾವಿಧ ಮಂಜುನಾಥ್ ರಚಿಸಿದ್ದನ್ನು ವೇದಿಕೆಯಲ್ಲಿ ಕುತೂಹಲದಿಂದ ನೋಡಿದ ಅಶ್ವಿನಿ ಸಹಿತ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್ ಪ್ರಾಸ್ತಾವಿಕ ನುಡಿ ಯೊಂದಿಗೆ, ಇಲಾಖಾ ಸಿಬ್ಬಂದಿ ಸ್ಪರ್ಧಾತ್ಮಕ ಸ್ಫೂರ್ತಿಯಿಂದ ಆಟಗಳಲ್ಲಿ ತೊಡಗಿಸಿ ಕೊಳ್ಳುವಂತೆ (ಮೊದಲ ಪುಟದಿಂದ) ಶುಭ ಕೋರಿದರು. ತಾ. 22 ರಂದು ಅಪರಾಹ್ನ ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಶರತ್‍ಚಂದ್ರ ಉಪಸ್ಥಿತಿಯಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಅಧಿಕಾರಿ ಪೂಣಚ್ಚ, ಲಯನ್ಸ್ ಅಧ್ಯಕ್ಷ ದಾಮೋದರ, ಡಿವೈಎಸ್ಪಿಗಳಾದ ಕೆ.ಎಸ್. ಸುಂದರರಾಜ್, ಮುರುಳಿಧರ್, ನಾಗಪ್ಪ ಸೇರಿದಂತೆ ವೃತ್ತ ನಿರೀಕ್ಷಕರುಗಳಾದ ಗಂಗಾಧರ, ಮೇದಪ್ಪ, ಅನೂಪ್ ಮಾದಪ್ಪ, ಭರತ್ ಸಹಿತ ವಿವಿಧ ಸ್ತರದ ಅಧಿಕಾರಿಗಳು, ನಿವೃತ್ತ ಉದ್ಯೋಗಿಗಳು ಪಾಲ್ಗೊಂಡಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರ ತಂದೆ ನಿವೃತ್ತ ಶಿಕ್ಷಕ ದೇಮಪ್ಪ ಪನ್ನೇಕರ್ ಹಾಗೂ ತಾಯಿ ಸರಸ್ವತಿ ಮತ್ತು ಎಸ್ಪಿ ಪುತ್ರಿ ಪುಟಾಣಿ ಖುಷಿ ಎಲ್ಲರ ಗಮನ ಸೆಳೆದರು.

ಮಡಿಕೇರಿ ಪೊಲೀಸ್ ಶಸಸ್ತ್ರದಳ, ಗ್ರಾಮಾಂತರ ಬಳಗ, ವೀರಾಜಪೇಟೆ, ಸೋಮವಾರಪೇಟೆ ಉಪ ವಿಭಾಗ, ಮಹಿಳಾ ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ಮತ್ತು ಪೊಲೀಸ್ ವಾದ್ಯ ತಂಡದ ದೇಶಭಕ್ತಿ ಗಾಯನ ಸ್ವರ ಆಕರ್ಷಕವಾಗಿತ್ತು.